ಸಚ್ಚಾರಿತ್ರ್ಯವುಳ್ಳವರು ಸಿಎಂ ಆದರೆ ಪಕ್ಷಕ್ಕೂ ಹೆಸರು ಬರುತ್ತದೆ : ಯತ್ನಾಳ್
ಬೆಳಗಾವಿ,ಡಿ.22- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಯಕತ್ವ ಯಾವುದೇ ಕಾರಣಕ್ಕೂ ಬದಲಾವಣೆಯಾಗುವುದಿಲ್ಲ. ಕಂದಾಯ ಸಚಿವ ಕೆ.ಎಸ್‍ಈಶ್ವರಪ್ಪ ಅವರ ಭವಿಷ್ಯ ಸುಳ್ಳಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳೀದ್ದಾರೆ.
ಕೆಲವರು ಹಣ ಇಟ್ಟುಕೊಂಡು ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ವಿಧಾನಸೌಧದ ಮೊಗಸಾಲೆಯಲ್ಲಿ ಈಗಾಗಲೇ ಮುಖ್ಯಮಂತ್ರಿಯಾಗಿದ್ದೇನೆ ಎಂದು ಎಂಜಿರಸ್ತೆಯಲ್ಲಿ 3 ಲಕ್ಷದ ಸೂಟ್ ಒಲಿಸಿಕೊಂಡು ತಿರುಗಾಡುತ್ತಿದ್ದಾರೆ. ಅವರ ಆಸೆ ಈಡೇರುವುದಿಲ್ಲ ಎಂದು ಯಾರ ಹೆಸರನ್ನು ಉಲ್ಲೇಖಿಸದೆ ವಾಗ್ದಾಳಿ ನಡೆಸಿದರು.
ನಾಯಕತ್ವ ಬದಲಾವಣೆ ಮಾಡುವುದಾದರೆ ವರಿಷ್ಠರು ಸೂಕ್ತವಾದ ನಿರ್ಧಾರ ಕೈಗೊಳ್ಳುತ್ತಾರೆ. ಪ್ರಧಾನಿ ಮೋದಿಯಂತವರ ಪ್ರಬಲ ನಾಯಕತ್ವ ಇರುವಾಗ ಹಣ ಇಟ್ಟುಕೊಂಡು ಶಾಸಕರನ್ನು ಖರೀದಿಸಿ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ನಮ್ಮ ಹೈಕಮಾಂಡ್ ಅತ್ಯಂತ ಪ್ರಬಲವಾಗಿದೆ. ಕಾಂಗ್ರೆಸ್ ಹೈಕಮಾಂಡ್‍ನಂತೆ ದುಡ್ಡು ತೆಗೆದುಕೊಂಡು ಮುಖ್ಯಮಂತ್ರಿ ಮಾಡುವುದಿಲ್ಲ. ಪಕ್ಷ ನಿಷ್ಠೆ, ಅವರ ಹಿನ್ನೆಲೆ, ಚಾರಿತ್ರೆ ಎಲ್ಲವನ್ನೂ ಅಳೆದುತೂಗಿ ನಾಯಕತ್ವ ನೀಡುತ್ತಾರೆ. ಹಣ ಇದ್ದವರೆಲ್ಲ ನಮ್ಮಲ್ಲಿ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದರು.
ನಾನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಮಂತ್ರಿಯಾಗಿದ್ದೆ. ಯಾರೊಬ್ಬರ ಕೈಕಾಲು ಹಿಡಿದುಕೊಂಡು ಸಂಪುಟಕ್ಕೆ ಸೇರ್ಪಡೆಯಾಗಬೇಕಾದ ಅಗತ್ಯವೂ ಇಲ್ಲ. ಹಿಂದೆ ಬಂದಂತಹ ಅನೇಕ ಆಸೆ-ಆಮಿಷಗಳನ್ನು ತಿರಸ್ಕರಿಸಿದ್ದೇನೆ.
ಕೆಲವರು ನನ್ನ ಬಳಿ ರಾಜೀಸಂಧಾನಕ್ಕೆ ಕಳುಹಿಸಿದ್ದರು. ನಾನು ಸ್ಪಷ್ಟವಾಗಿ ಏನು ಹೇಳಬೇಕೋ ಅದನ್ನು ಹೇಳಿ ಕಳುಹಿಸಿದ್ದೇನೆ. ಆಸೆ ಆಮಿಷಗಳಿಗೆ ಬಗ್ಗುವಂತಹ ವ್ಯಕ್ತಿ ನಾನಲ್ಲ. ಯಡಿಯೂರಪ್ಪನವರೇ ನನ್ನನ್ನು ಸಿಎಂ ಮಾಡುತ್ತೇನೆ ಎಂದು ಹೇಳಿದಾಗ ಒಪ್ಪಿಕೊಂಡವನಲ್ಲ. ಈಗ ಇಂತಹ ಸಣ್ಣಪುಟ್ಟ ಆಮಿಷಗಳಿಗೆ ಬಗ್ಗುವವನಲ್ಲ ಎಂದು ವಾಗ್ದಾಳಿ ನಡೆಸಿದರು.
ಭ್ರಷ್ಟರು, ಸುಳ್ಳು ಹೇಳುವವರು, ಶಾಸಕರಿಗೆ ಆಮಿಷವೊಡ್ಡುವವರು ಮುಖ್ಯಮಂತ್ರಿಯಾದರೆ ರಾಜ್ಯದ ಪರಿಸ್ಥಿತಿ ಏನಾಗಬಾರದು. ಪ್ರಾಮಾಣಿಕರು, ಸಚ್ಚಾರಿತ್ರ್ಯವುಳ್ಳವರು ಸಿಎಂ ಆದರೆ ಸರ್ಕಾರ, ರಾಜ್ಯ ಮತ್ತು ಪಕ್ಷಕ್ಕೂ ಹೆಸರು ಬರುತ್ತದೆ. ಒಂದು ವೇಳೆ ಅಂಥ ಭ್ರಷ್ಟರು ಸಿಎಂ ಸ್ಥಾನದಲ್ಲಿ ಕೂರುವುದಾದರೆ ಖಂಡಿತವಾಗಿಯೂ ನಾನು ಮಂತ್ರಿಯಾಗುವುದಿಲ್ಲ ಎಂದು ಶಪಥ ಮಾಡಿದರು.
ನನಗೆ ಸ್ವತಃ ಸಿಎಂ ಬೊಮ್ಮಾಯಿ ಅವರೇ ಸಂಪುಟಕ್ಕೆ ಸೇರ್ಪಡೆಯಾಗುವಂತೆ ಮನವಿ ಮಾಡಿದ್ದರು. ಮೊದಲು ತಮ್ಮ ಸಮುದಾಯದ ಬೇಡಿಕೆಯಂತೆ ಮೀಸಲಾಯಿತಿ ಪ್ರಮಾಣವನ್ನು ಹೆಚ್ಚಳ ಮತ್ತು ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪ್ಡೆ ಮಾಡಬೇಕು ಎಂದು ಹೇಳಿದ್ದು, ಆ ಬೇಡಿಕೆ ಈಡೇರಿಕೆ ನಂತರವೇ ಸಂಪುಟಕ್ಕೆ ಸೇರುತ್ತೇನೆ. ನನನ್ನು ಯಾರೂ ಕೂಡ ಆಸೆಆಮಿಷಗಳನ್ನು ಒಡ್ಡಿ ದಾರಿತಪ್ಪಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ಯಾವುದೇ ಧರ್ಮವನ್ನು ಗುರಿಯಾಗಿಟ್ಟುಕೊಂಡು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡಿಲ್ಲ. ಭಾರತ ಭಾರತವಾಗಿ ಉಳಿಯಬೇಕು. ಈಗಾಗಲೇ ಧರ್ಮದ ಆಧಾರದ ಮೇಲೆ ದೇಶ ವಿಭಜನೆಯಾಗಿದೆ. ಕಾಂಗ್ರೆಸ್ ಪಕ್ಷದವರು ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.