ರಾಯಚೂರು-ಬೂರ್ದಿಪಾಡು ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ರಾಯಚೂರು-ಬೂರ್ದಿಪಾಡು ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ರಾಯಚೂರು.ಅ.೦೩- ತಾಲೂಕಿನ ರಾಯಚೂರು ಮತ್ತು ಬೂರ್ದಿಪಾಡು ರಸ್ತೆಯ ಜನತಾ ಆಶ್ರಯ ಕಾಲೋನಿ ಮೋರಾರ್ಜಿ ದೇಸಾಯಿ ಶಾಲೆಯಿಂದ ಕಡಗಂದೊಡ್ಡಿವರೆಗೆ ಡಾಂಬರ್ ಕಿತ್ತು ಹೋಗಿ, ಗುಂಡಿಗಳಿಂದ ತುಂಬಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು, ತಕ್ಷಣವೇ ರಸ್ತೆ ಸುಧಾರಿಸುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ.
ರಾಯಚೂರು-ಬೂರ್ದಿಪಾಡು ಮಧ್ಯೆ ಪ್ರಮುಖ ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸಾರ್ವಜನಿಕರು ಈ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಉಟ್ಕೂರು ಮಾರೆಮ್ಮ ದೇವಸ್ಥಾನದಿಂದ ಕಡಗಂದೊಡ್ಡಿ ಹಳ್ಳದವರೆಗೆ ಸುಮಾರು ೨ ಕಿ.ಮೀ. ರಸ್ತೆ ಗುಂಡಿಗಳಿಂದ ತುಂಬಿ ಹೋಗಿದೆ. ಈ ರಸ್ತೆಯಿಂದಾಗಿ ಅನೇಕರು ಗಾಯಗೊಂಡಿದ್ದಾರೆ. ಜಂಬಯ್ಯ ತಂದೆ ತಿಮ್ಮಯ್ಯ ಹಾಗೂ ಈರಣ್ಣ ತಂದೆ ನರಸಪ್ಪ ಎನ್ನುವವರು ಈ ರಸ್ತೆಯಲ್ಲಿ ಅಪಘಾತಕ್ಕೊಳಗಾಗಿ ಮೃತಪಟ್ಟಿದ್ದಾನೆ.
ವಾಸುರಾಜ, ನವದೀಪ, ಅಖಿಲ್, ರಾಘವೇಂದ್ರ, ರಂಗಪ್ಪ, ನರಸಮ್ಮ, ಪದ್ಮಾ, ನರಸಮ್ಮ, ಹನುಮಂತ, ಕರಿಯಪ್ಪ, ಭೀಮರಾಯ ಸೇರಿದಂತೆ ಮಲ್ಲೇಶ ಇವರು ಸಹ ಗಾಯಗೊಂಡಿದ್ದಾರೆ. ತಕ್ಷಣವೇ ಈ ರಸ್ತೆಯನ್ನು ದುರಸ್ತಿ ಮಾಡುವಂತೆ ಅನಿರ್ದಿಷ್ಠ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಶರಣಪ್ಪ ದಿನ್ನಿ, ಸಣ್ಣ ಈರಣ್ಣ ಗಣಮೂರು, ಕರಿಯಪ್ಪ ರಂಗೋಲಿ, ಚನ್ನಬಸವ ಯಕ್ಲಾಸಪೂರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದಾರೆ.