ಮಂಗಳೂರು: ಕಡಬ ತಾಲೂಕಿನ ಬಲ್ಯ ಗ್ರಾಮಕ್ಕೆ ಸಚಿವ ಎಸ್ ಅಂಗಾರ ಅವರು ರಸ್ತೆ ಕಾಮಗಾರಿ ಗುದ್ದಲಿ ಪೂಜೆಗೆ ಅಂತಾ ಆಗಮಿಸಿದ್ದರು.ಈ ವೇಳೆ ಸಚಿವರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಈಗಾಗಲೇ ಬಲ್ಯ ಗ್ರಾಮದ ಹಲವೆಡೆ ಮತದಾನ ಬಹಿಷ್ಕಾರ ಎಂಬ ಬ್ಯಾನರ್ ಕೂಡಾ ಹಾಕಲಾಗಿದೆ.
ರಸ್ತೆ ಕಾಮಗಾರಿಯೊಂದಕ್ಕೆ ಗುದ್ದಲಿ ಪೂಜೆ ನೆರವೇರಿಸುವ ವೇಳೆ ಗ್ರಾಮಸ್ಥರು ನೀಡಿದ ಮನವಿಯನ್ನು ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ. ಕೋಪಗೊಂಡ ಸ್ಥಳೀಯರು ಅಂಗಾರ ಮತ್ತು ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ಇಂತಹ ಹಲವು ಘಟನೆಗಳಿಂದ ಕೋಪಗೊಂಡ ಗ್ರಾಮಸ್ಥರು ಮತದಾನ ಬಹಿಷ್ಕಾರದ ಬ್ಯಾನರ್ಗಳನ್ನು ಗ್ರಾಮದ ಕೆಲವು ಕಡೆಗಳಲ್ಲಿ ಅಳವಡಿಸಿದ್ದಾರೆ.ಬಲ್ಯ ಗ್ರಾಮದಲ್ಲಿ ಸುಮಾರು 85 ಲಕ್ಷ ರೂಪಾಯಿ ಅನುದಾನದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಸಚಿವರಾದ ಎಸ್.ಅಂಗಾರ ಅವರು ಗುದ್ದಲಿ ಪೂಜೆ ನೆರವೇರಿಸಿದ್ದರು. ಇದರಲ್ಲಿ ಬಲ್ಯ ಗ್ರಾಮದ ಗುತ್ತು - ಕಲ್ಲೇರಿ ರಸ್ತೆ ಕಾಂಕ್ರಿಟೀಕರಣ 20 ಲಕ್ಷ, ದೇವತ್ತಡ್ಕ - ಕರಂದಾಯ - ಬಾರಿಕೆ - ನಾಲ್ಗುತ್ತು ರಸ್ತೆ ಕಾಂಕ್ರಿಟೀಕರಣ 25 ಲಕ್ಷ ರೂ, ಹೊಸ್ಮಠ-ಬಲ್ಯ-ದೇರಾಜೆ-ಪನ್ಯಾಡಿ ರಸ್ತೆಗೆ 40 ಲಕ್ಷ ರೂಪಾಯಿಗಳನ್ನು ಮೀಸಲಿಡಲಾಗಿದೆ ಎಂದು ಹೇಳಲಾಗಿದೆ.