ಸಿದ್ದರಾಮಯ್ಯ ಯಾವ ಕಾರಣಕ್ಕೂ ಕೋಲಾರದಲ್ಲಿ ಸ್ಪರ್ಧಿಸಲ್ಲ; ಮಾಡಿದರೂ..: ಈಶ್ವರಪ್ಪ
ಶಿವಮೊಗ್ಗ: ಸಿದ್ದರಾಮಯ್ಯ ಯಾವ ಕಾರಣಕ್ಕೂ ಕೋಲಾರದಲ್ಲಿ ಸ್ಪರ್ಧೆ ಮಾಡುವುದಿಲ್ಲ. ಒಂದು ವೇಳೆ ಮಾಡಿದರೂ ಸೋಲುತ್ತಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಚಾಮುಂಡೇಶ್ವರಿ, ಬಾದಾಮಿಯ ಜನರಿಗೂ ಅವರ ಹಣೆಬರಹ ಗೊತ್ತು. ಕಾಂಗ್ರೆಸ್ ನಲ್ಲಿ ಎಲ್ಲಿ ಬೇಕೋ ಅಲ್ಲಿ ತೀರ್ಮಾನ ಮಾಡುವ ಕೆಲವು ನಾಯಕರಿದ್ದಾರೆ. ಚುನಾವಣೆಯಲ್ಲಿ ಸೋತರೂ ವಿಶ್ವಾಸ ಪಡೆಯುವ ಕೆಲಸ ಮಾಡಬೇಕು ಎಂದು ಈಶ್ವರಪ್ಪ ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಷ್ಟ್ರದ್ರೋಹಿ ಸಂಘಟನೆಗಳೊಂದಿಗೆ ನೇರ ಹೊಂದಾಣಿಕೆ ಮಾಡುತ್ತಿದೆ. ಇದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ತಯಾರಿ ನಡೆಸುತ್ತಿದೆ. ರಾಜ್ಯದ ಜನರು ಗಮನಿಸಬೇಕು. ರಾಷ್ಟ್ರದ್ರೋಹಿ ಮುಸ್ಲಿಂ ಸಂಘಟನೆಗಳು ದೇಶದಲ್ಲಿ ಕೆಲಸ ಮಾಡುತ್ತಿವೆ. ಬಾಂಬ್ ಉತ್ಪಾದನೆ, ದೇಶದ್ರೋಹದ ಕೆಲಸಕ್ಕೆ ಯುವಕರಿಗೆ ಪ್ರಚೋದನೆ ಕೊಡುತ್ತಿವೆ. ರಾಜ್ಯದ ಪೊಲೀಸರು, ಗೃಹ ಇಲಾಖೆ ಹಲವರನ್ನು ಬಂಧಿಸಿದರು, ಕೆಲವರನ್ನು ಗಡಿಪಾರು ಮಾಡಿದರು. ಶಾಂತಿಯಿಂದ ಇದ್ದ ಶಿವಮೊಗ್ಗದಲ್ಲಿ ಹರ್ಷನ ಕೊಲೆ ಮಾಡಿದರು. ಸಾವರ್ಕರ್ ಫ್ಲೆಕ್ಸ್ ಹರಿದು, ಗಲಾಟೆ ಮಾಡಿದರು. ಮಂಗಳೂರು ಕುಕ್ಕರ್ ಬ್ಲಾಸ್ಟ್ ಆದಾಗ ಅಮಾಯಕನ ಬಂಧಿಸಿದರೆಂದು ಎಂದು ಡಿಕೆಶಿ ಹೇಳಿದ್ದರು. ಕಾಂಗ್ರೆಸ್ ನೀಚತನಕ್ಕೆ ಇಳಿದಿರುವ ಬಗ್ಗೆ ನಮಗೆ ಯಾವುದೇ ಅನುಮಾನ ಇಲ್ಲ. ಆದರೆ ಅದನ್ನು ನಾವು ಎದುರಿಸುತ್ತೇವೆ. ಈ ಕಾರಣಕ್ಕೆ ರಾಜ್ಯದ ಜನರು ದೇಶಭಕ್ತ ಬಿಜೆಪಿ ಸಂಘಟನೆ ಬೆಂಬಲಿಸಬೇಕು ಎಂದು ಈಶ್ವರಪ್ಪ ಹೇಳಿದರು.
ಅಧಿಕಾರಕ್ಕಾಗಿ ಇವರು ಯಾವ ಮಟ್ಟಕ್ಕೆ ಹೋಗುತ್ತಾರೆಂದು ರಾಜ್ಯದ ಜನರಿಗೆ ಇಂದು ಕಾಂಗ್ರೆಸ್ ನೋಡಿ ಆಶ್ಚರ್ಯ ಅಗುತ್ತಿದೆ. ರಾಷ್ಟ್ರದ್ರೋಹಿ ಕಾಂಗ್ರೆಸ್ ಪಕ್ಷವನ್ನು ದೇಶದ ಅನೇಕ ರಾಜ್ಯದಲ್ಲಿ ಜನರು ಮನೆ ಕಳುಹಿಸಿದ್ದಾರೆ. ಅದೇ ರೀತಿ ರಾಜ್ಯದಲ್ಲೂ ಬುದ್ದಿ ಕಲಿಸಿ ಎಂದು ಈಶ್ವರಪ್ಪ ಮನವಿ ಮಾಡಿದರು.