ಯುವತಿ ಕೊಲೆ ಆರೋಪಿ ಶವ ಪತ್ತೆ
ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಂಗಲ ಗ್ರಾಮದ ಆರತಿ (24) ಅವರನ್ನು ಕೊಲೆ ಮಾಡಿದ ಆರೋಪಿ ತಿಮ್ಮಯ್ಯ ಶವ ಅದೇ ಗ್ರಾಮದ ಕೆರೆಯಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ.
'ಭಾನುವಾರ ರಾತ್ರಿ ಯುವತಿಗೆ ಮೊಬೈಲ್ ಕರೆ ಮಾಡಿ ಮನೆಯಿಂದ ಹೊರಗೆ ಕರೆಸಿಕೊಂಡ ಆರೋಪಿಯು ಆಕೆಯ ಮನೆಯ ಸಮೀಪವೆ ಕತ್ತಿಯಿಂದ ಕುತ್ತಿಗೆ ಹಾಗೂ ದೇಹದ ಇತರ ಭಾಗಗಳ ಮೇಲೆ ಹಲ್ಲೆ ಮಾಡಿ ಕೊಂದು ಹಾಕಿದ್ದ. ನಂತರ ತನ್ನ ಮನೆಗೆ ತೆರಳಿ ಕ್ರಿಮಿನಾಶಕ ಸೇವಿಸಿ ಕೆರೆಗೆ ಬಿದ್ದಿದ್ದ. ಕೆರೆಯ ದಡದಲ್ಲಿ ಅರ್ಧ ಖಾಲಿಯಾದ ಕ್ರಿಮಿನಾಶಕದ ಬಾಟಲಿ, ಚಪ್ಪಲಿ ಹಾಗೂ ಮೊಬೈಲ್ ಪತ್ತೆಯಾಗಿದ್ದು, ಎರಡು ದಿನಗಳಿಂದ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿತ್ತು. ಬುಧವಾರ ಬೆಳಿಗ್ಗೆ ಶವವು ಪತ್ತೆಯಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
ಶ್ವಾನದಳವು ಮೂರು ಬಾರಿ ಕೆರೆಯ ಬಳಿ ಬಂದಿದ್ದರಿಂದ ಕೆರೆಗೆ ಆರೋಪಿ ಬಿದ್ದಿರುವುದು ಬಹುತೇಕ ಖಚಿತವಾಗಿತ್ತು. 20 ಅಡಿ ಆಳದ ಕೆರೆಯಲ್ಲಿ ಆರೋಪಿಯ ಶವ ತಳದಲ್ಲಿ ಸಿಲುಕಿಕೊಂಡಿತ್ತು. ಕೆರೆಯ ಸ್ವಲ್ಪ ಭಾಗದ ನೀರನ್ನು ಹೊರಕ್ಕೆ ಚೆಲ್ಲಿ ಹಿಟಾಚಿ ಯಂತ್ರ ಬಳಸಿ ಶವವನ್ನು ತೆಗೆಯಲಾಯಿತು. ಇದೊಂದು ಅತಿ ಕ್ಲಿಷ್ಟಕರ ಕಾರ್ಯಾಚರಣೆ ಆಗಿತ್ತು ಎಂದು ಹೇಳಿದ್ದಾರೆ.