ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ದಾವಣಗೆರೆ : ಲೋಕಾಯುಕ್ತ ದಾಳಿಯ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ಮಾಡಾಳು ವಿರೂಪಾಕ್ಷಪ್ಪ ರಾಜೀನಾಮೆ ನೀಡಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಜಯದೇವ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು, ಕ್ಯೂಆರ್ ಕೋಡ್‌ನಲ್ಲಿ ಮಾಡಾಳು ವಿರೂಪಾಕ್ಷಪ್ಪ ಅವರ ಭಾವಚಿತ್ರವಿರುವ, '40 ಪರ್ಸೆಂಟ್ ಹಣವನ್ನು ಇಲ್ಲಿ ಸ್ವೀಕರಿಸಲಾಗುತ್ತದೆ' ಎಂದು ಬರೆಯಲಾದ ಭಿತ್ತಿಪತ್ರವನ್ನು ಕೈಯಲ್ಲಿ ಹಿಡಿದು, ನೋಟುಗಳಿರುವ ಕಲ್ಪಿತ ಸೂಟ್‌ಕೇಸ್ ಅನ್ನು ಪ್ರದರ್ಶಿಸಿ, ನಂತರ ಭಿತ್ತಿಪತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ಜಿ.ಎಸ್. ಮಂಜುನಾಥ್ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು. ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿಯ ಭ್ರಷ್ಟಾಚಾರಕ್ಕೆ ಇದೊಂದು ದೊಡ್ಡ ಉದಾಹರಣೆಯಾಗಿದೆ. ಇದೇ ರೀತಿ ಹಲವು ಸಚಿವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು ಅವರ ಮೇಲೂ ಲೋಕಾಯುಕ್ತ ದಾಳಿ ನಡೆಸಬೇಕು ಎಂದು ಆಗ್ರಹಿಸಿದರು.
ಈ ರೀತಿ ಭ್ರಷ್ಟಾಚಾರದಲ್ಲಿ ಭಾಗಿಯಾಗುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಖರ್ಚು ಮಾಡಲು ಬಿಜೆಪಿ ನಾಯಕರು ಹಣವನ್ನು ಜೋಡಿಸಿಕೊಳ್ಳುತ್ತಿದ್ದಾರೆ. ಜನರು ಇದನ್ನು ಅರ್ಥ ಮಾಡಿಕೊಂಡು ಅವರಿಗೆ ಪಾಠ ಕಲಿಸಬೇಕು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್ ಮಾತನಾಡಿ, 40 ಪರ್ಸೆಂಟ್ ಭ್ರಷ್ಟಾಚಾರದ ಬಗ್ಗೆ ನಾವು ಆರೋಪ ಮಾಡಿದಾಗಲೆಲ್ಲ ಸಾಕ್ಷಿ ಎಲ್ಲಿದೆ ಎಂದು ಬಿಜೆಪಿಯವರು ಕೇಳುತ್ತಿದ್ದರು. ಇದಕ್ಕಿಂತ ಸಾಕ್ಷಿ ಬೇಕೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ಜಿ. ಶಿವಕುಮಾರ್ ಒತ್ತಾಯಿಸಿದರು. ಈ ಪ್ರಕರಣದ ಮೂಲಕ ರಾಜ್ಯಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡಿದ್ದಾರೆ ಎಂದು ಯುವ ಮುಖಂಡ ಮೈನುದ್ದೀನ್ ದೂರಿದರು.
ಪಾಲಿಕೆ ಸದಸ್ಯರಾದ ಪಾಮೇನಹಳ್ಳಿ ನಾಗರಾಜ್, ಕಲ್ಲಳ್ಳಿ ನಾಗರಾಜ್, ಮುಖಂಡರಾದ ತಿಪ್ಪೇಶ್, ಜಗದೀಶ್, ಎಚ್. ಜಯಣ್ಣ ಇದ್ದರು.