ಬಿಜೆಪಿ ಸದಸ್ಯರೊಂದಿಗೆ ಆಗಮಿಸಿ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಸದಸ್ಯ

ದಾವಣಗೆರೆ, ಮಾ.4: ಬಿಜೆಪಿ ಸದಸ್ಯರೊಂದಿಗೆ ಕಾಂಗ್ರೆಸ್ ಸದಸ್ಯ ವಿನಾಯಕ ಪೈಲ್ವಾನ್ ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಘಟನೆ ಶನಿವಾರ ನಡೆದಿದ್ದು, ಈ ವೇಳೆ ಪಾಲಿಕೆ ಆವರಣದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು.
ಇಂದು ಅಪರಾಹ್ನ 3 ಗಂಟೆಗೆ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಯಿಂದ 1 ರವರೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯಿತು. ಮೊದಲು ಕಾಂಗ್ರೆಸ್ ನಿಂದ ಸವಿತಾ ಗಣೇಶ್ ಹುಲಿಮನೆ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರೆ, ಶಿವಲೀಲಾ ಕೊಟ್ರಯ್ಯ ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಇದೇವೇಳೆ ಅಜ್ಞಾತ ಸ್ಥಳದಿಂದ ಬಿಜೆಪಿ ಮುಖಂಡರ ಕಾರಿನಲ್ಲಿ ಪಾಲಿಕೆ ಕಚೇರಿಗೆ ಮಾಜಿ ಮೇಯರ್ ಎಸ್.ಟಿ. ವೀರೇಶ್, ಪ್ರಸನ್ನಕುಮಾರ್, ಸೋಗಿ ಶಾಂತ್ ಕುಮಾರ್ ಅವರೊಂದಿಗೆ ಕಾಂಗ್ರೆಸ್ ಸದಸ್ಯ ವಿನಾಯಕ ಪೈಲ್ವಾನ್ ನಾಮಪತ್ರ ಸಲ್ಲಿಸಲು ಆಗಮಿಸಿದರು. ಆಗ 'ಪಕ್ಷಕ್ಕೆ ದ್ರೋಹ ಮಾಡಬೇಡ, ಬನ್ನಿ' ಎಂದು ಕಾಂಗ್ರೆಸ್ ಸದಸ್ಯರು ವಿನಂತಿಸಿದರು. ಆದರೆ ಅದಕ್ಕೆ ಸೊಪ್ಪು ಹಾಕದ ವಿನಾಯಕ ಪೈಲ್ವಾನ್ ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳ ಕೊಠಡಿಗೆ ತೆರಳಿದರು.
ವಿನಾಯಕ ಪೈಲ್ವಾನ್ ಬಿಜೆಪಿ ಸದಸ್ಯರೊಂದಿಗೆ ನಾಮಪತ್ರ ಸಲ್ಲಿಸಿ ಹೊರ ಬರುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಮತ್ತೆ ಅವರಿಗೆ ಮುತ್ತಿಗೆ ಹಾಕಿ, 'ಪಕ್ಷಕ್ಕೆ ದ್ರೋಹ ಮಾಡಬೇಡ. ಬನ್ನಿ ನಮ್ಮೊಂದಿಗೆ' ಎಂದು ಜೊತೆಗೆ ಕರೆದುಕೊಂಡು ಹೋಗಲು ಯತ್ನಿಸಿದರು. ಆದರೆ ಬಿಜೆಪಿ ಸದಸ್ಯರು ಅದಕ್ಕೆ ಅವಕಾಶ ನೀಡದೆ ಕಾರಿನಲ್ಲಿ ಕುರಿಸಿಕೊಂಡು ಹೋಗಲು ಯತ್ನಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ವಿನಾಯಕ ಪೈಲ್ವಾನ್ ಅವರನ್ನು ತಡೆದರು. ಇದು ನೂಕಾಟ, ತಳ್ಳಾಟಕ್ಕೆ ಕಾರಣವಾಯಿತು. ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಬಿಜೆಪಿ ನಾಯಕರು ಹಿಂಬಾಲಿನ ರಾಜಕಾರಣ ಮಾಡುವುದೇ ಇವರ ಜಾಯಮಾನವಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಾಂಗ್ರೆಸ್ ಸದಸ್ಯರು ನೀನೇ ಮೇಯರ್ ಆಗುವಂತೆ ಬಾ, ಭ್ರಷ್ಟ ಬಿಜೆಪಿಯೊಂದಿಗೆ ಹೋಗಬೇಡ ಬಾ ಎಂದು ಕರೆದರೂ, ಕೂಡ ನಿಮ್ಮ ಕಾಂಗ್ರೆಸ್ ಪಕ್ಷ ಏನು ಕೊಟ್ಟಿದೆ ಎಂದು ಪ್ರಶ್ನಿಸಿ ಬಿಜೆಪಿ ಕಾರಿನಲ್ಲಿ ತೆರಳಿದರು.