ಮರುಭೂಮಿಯಲ್ಲಿ ಚಿನ್ನದ ಬೆಳೆ ತೆಗೆಯುವ ಮಗನ್‌ಭಾಯ್
ಶಿವಮೊಗ್ಗ: ಕಿಂಚಿತ್ತೂ ವಿಷವುಣಿಸದೇ ಮರುಭೂಮಿ ಸೆರಗಿನ ಸವಳು ಭೂಮಿಯಲ್ಲಿ ಅಕ್ಷರಶಃ ಚಿನ್ನದ ಬೆಳೆ ತೆಗೆಯುತ್ತಿರುವ ಗುಜರಾತ್‌ನ ರೈತ ಮಗನ್‌ಭಾಯ್ ಹಮೀರ್‌ಭಾಯ್ ಅವರು ತೀರ್ಥಹಳ್ಳಿಯ ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನವು ಸಾವಯವ ಕೃಷಿಕ ಪುರುಷೋತ್ತಮ ರಾಯರು ಹಾಗೂ ಶಾಂತಾ ದಂಪತಿಯ ಸ್ಮರಣೆಯಲ್ಲಿ ನೀಡುವ 'ಪುರುಷೋತ್ತಮ ಸನ್ಮಾನ'ಕ್ಕೆ ಭಾಜನರಾಗಲಿದ್ದಾರೆ.
ಪಾಕಿಸ್ತಾನದ ಗಡಿ ಸಮೀಪದಲ್ಲಿರುವ ಗುಜರಾತ್‌ನ ಕಛ್ ಪ್ರದೇಶದ ಗಾಂಧಿಧಾಮ್ ಜಿಲ್ಲೆಯ ಅಂಜರ್ ತಾಲ್ಲೂಕಿನ ನಿಂಗಲ್ ಗ್ರಾಮದಲ್ಲಿ ಮಗನ್‌ಭಾಯ್ ಹಾಗೂ ಧನುಬೆನ್ ದಂಪತಿಯ ಕುಟುಂಬ ನೆಲೆಸಿದ್ದು, ಕೃಷಿಯಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ಕಛ್ ಪ್ರದೇಶದ್ದು ಉಪ್ಪಿನ ಅಂಶ ಹೆಚ್ಚಾಗಿರುವ ಸವಳು ಭೂಮಿ. ಲಕ್ಷಾಂತರ ವರ್ಷಗಳ ಹಿಂದೆ ಜ್ವಾಲಾಮುಖಿಯಿಂದ ಹರಿದಿದ್ದ ಲಾವಾರಸ ತಂಪಾಗಿ ರೂಪುಗೊಂಡ ಮಣ್ಣು ಇದು. ಹಸಿರೆಲೆ ಗೊಬ್ಬರ, ಮುಚ್ಚಿಗೆ ಪದ್ಧತಿ, ಕೊಟ್ಟಿಗೆ ಗೊಬ್ಬರಗಳ ಹದಬಳಕೆಯಿಂದ ಮಗನ್‌ಭಾಯ್ ತಮ್ಮ ಪಾಲಿನ 20 ಎಕರೆ ಭೂಮಿಯ ಫಲವತ್ತತೆ ಕಾಪಾಡಿಕೊಂಡಿದ್ದಾರೆ.
ಸಮಗ್ರ ಕೃಷಿಯ ಭಾಗವಾಗಿ ಮಣ್ಣಿನ ಮಿಡಿತ ಅರಿತ ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಅರಬ್ ರಾಷ್ಟ್ರಗಳಲ್ಲಿ ಕಾಣಸಿಗುವ ಖರ್ಜೂರ ಜೊತೆಗೆ ಕಬ್ಬು, ಹರಳು, ಗೋಧಿ, ಕುದುರೆ ಮಸಾಲೆ, ಮಾವು, ಹೆಸರು, ಸಜ್ಜೆ, ಎಳ್ಳು, ಕಡಲೆಕಾಯಿ, ಹಸಿರೆಲೆ ಗೊಬ್ಬರ (ಡಯಂಚ), ತರಕಾರಿ, ಕ್ಯಾರೆಟ್, ಪಾಲಕ್, ಸೋರೆಕಾಯಿ, ಮೂಲಂಗಿ, ಬದನೆ, ಟೊಮೆಟೊ, ಹಸಿಮೆಣಸಿನಕಾಯಿ, ಅಲಸಂದೆ, ಮೆಂತ್ಯ, ಧನಿಯಾ
ಬೆಳೆಯುತ್ತಾರೆ.
62ರ ಹರೆಯದ ಮಗನ್‌ಭಾಯ್‌ಗೆ ನೇತೃತ್ವದಲ್ಲಿ ಇಡೀ ಕುಟುಂಬ ಕೃಷಿಯ ನಂಬಿಕೆಗಳಿಗೆ, ಪ್ರಯೋಗಗಳಿಗೆ ಆಸರೆಯಾಗಿದೆ. ದಿನಚರಿ ಬರೆಯುವುದರೊಂದಿಗೆ ಇವರ ಕುಟುಂಬದ ದಿನ ಶುರುವಾಗುತ್ತದೆ. ಹೊಲದ ಒಂದು ಭಾಗದಲ್ಲಿ ಈ ವರ್ಷ ಬೆಳೆದ ಬೆಳೆಯನ್ನು ಮುಂದಿನ ವರ್ಷ ಬದಲಿಸುತ್ತಾರೆ. ಇದರಿಂದ ಕೀಟ ಮತ್ತು ರೋಗಬಾಧೆ ಕಡಿಮೆಯಾಗುತ್ತದೆ ಎಂದು ಮಗನ್‌ಭಾಯ್
ಹೇಳುತ್ತಾರೆ.
ಕೃಷಿ ಆಧಾರಿತ ಜೀವನ ಪದ್ಧತಿಯು ಯಶಸ್ವಿಯಾಗಲು 11 ಅಂಶಗಳನ್ನು ಸೂತ್ರವಾಗಿಸಿಕೊಂಡಿದ್ದಾರೆ. ಕಾಂಪೋಸ್ಟ್, ಹಸಿರೆಲೆ ಗೊಬ್ಬರ, ಹೊಸ ಮಣ್ಣು, ಬೆಳೆ ಬದಲಾವಣೆ, ಅಕ್ಕಡಿ ಬೆಳೆ, ಕಳೆ, ನೀರು ನಿರ್ವಹಣೆ, ಉಳುಮೆ, ದೇಸಿ ಬೆಳೆ, ಜಲ-ವಾಯು ನಿರ್ವಹಣೆ, ಲೆಕ್ಕಾಚಾರದ ಬದುಕನ್ನು ಅಳವಡಿಸಿಕೊಂಡಿದ್ದಾರೆ.