ಮಟನ್ ಶಾಪ್ ನಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು: ಕೊಲೆಯೋ ಅಥವಾ ಆತ್ಮಹತ್ಯೆಯೋ.?

ಮಟನ್ ಶಾಪ್ ನಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು: ಕೊಲೆಯೋ ಅಥವಾ ಆತ್ಮಹತ್ಯೆಯೋ.?

ಸಂಬಂಧಿಕರ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬ ಅವರದ್ದೇ ಮಾಂಸದ ಅಂಗಡಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಹಳೇಹುಬ್ಬಳ್ಳಿಯ ಮೆಹಬೂಬ್ ನಗರದಲ್ಲಿ ನಡೆದಿದೆ.

ಮೃತ ವ್ಯಕ್ತಿ 40 ವರ್ಷ ವಯಸ್ಸಿನ ಅಶ್ಪಾಕ್ ಬೇಪಾರಿ ಎಂದು ತಿಳಿದು ಬಂದಿದ್ದು, ನಿನ್ನೆಯಷ್ಟೇ ಹುಬ್ಬಳ್ಳಿಯ ಮೆಹಬೂಬ್ ನಗರದಲ್ಲಿನ ಸಂಬಂಧಿಕರಾದ ಬೇಪಾರಿ ಎಂಬುವರ ಮನೆಗೆ ಬಂದಿದ್ದ. ನಿನ್ನೆವರೆಗೂ ಚೆನ್ನಾಗಿಯೇ ಇದ್ದ ವ್ಯಕ್ತಿ, ಇಂದು ಮಧ್ಯಾಹ್ನ ಸಂಬಂಧಿಕರ ಮಟನ್ ಅಂಗಡಿಯಲ್ಲಿಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ.
 
ಮೂಲತಃ ಬೈಲಹೊಂಗಲದ ಬೆಳವಡಿ ಗ್ರಾಮದವನಾದ ಮೃತ ಅಶ್ಪಾಕ್, ಹುಬ್ಬಳ್ಳಿಯಲ್ಲಿ ಮಾಂಸದ ವ್ಯಾಪಾರ ನಡೆಸುತ್ತಿದ್ದ. ಆದರೆ ನಿನ್ನೆ ಊರಿಂದ ಬಂದವನು ಇಂದು ಹೆಣವಾಗಿದ್ದಾನೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸ್ಥಳಕ್ಕೆ ಅಪರಾಧ ವಿಭಾಗದ ಡಿಸಿಪಿ ಗೋಪಾಲ ಬ್ಯಾಕೋಡ್ ಹಾಗೂ ಹಳೇಹುಬ್ಬಳ್ಳಿ ಠಾಣೆಯ ಪೋಲಿಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.