ಬಿಟಿಆರ್ ಶೀಲ್ಡ್ ಕ್ರಿಕೆಟ್: ವಿಶ್ವದಾಖಲೆ ಜೊತೆಯಾಟ

ಬಿಟಿಆರ್ ಶೀಲ್ಡ್ ಕ್ರಿಕೆಟ್: ವಿಶ್ವದಾಖಲೆ ಜೊತೆಯಾಟ

ಬೆಂಗಳೂರು: ಗೋಪಾಲನ್ ನ್ಯಾಷನಲ್ ಸ್ಕೂಲ್ ತಂಡದ ಜಿ. ಅರವಿಂದ್ ಮತ್ತು ಜಿ.ಕೆ. ಸಾಯಿವರುಣ್ ಅವರು ಬಿ.ಟಿ. ರಾಮಯ್ಯ ಶೀಲ್ಡ್‌ 14 ವರ್ಷದೊಳಗಿನವರ ಒಂದನೇ ಗುಂಪಿನ ಮೊದಲ ಡಿವಿಷನ್‌ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯದಲ್ಲಿ ಪ್ರಥಮ ವಿಕೆಟ್ ಜೊತೆಯಾಟದ ವಿಶ್ವದಾಖಲೆ ಮಾಡಿದರು.

ಅರವಿಂದ (ಅಜೇಯ 277; 159ಎ, 4X42) ಮತ್ತು ಸಾಯಿವರುಣ್ (ಅಜೇಯ 247; 154ಎ, 4X36) ಮುರಿಯದ ಮೊದಲ ವಿಕೆಟ್‌ಗೆ 549 ರನ್‌ (50 ಓವರ್‌ಗಳಲ್ಲಿ) ಸೇರಿಸಿದರು. ಈ ಆಟದ ನೆರವಿನಿಂದ ತಂಡವು ವಿದ್ಯಾನಿಕೇತನ ಶಾಲೆ ಎದುರು 486 ರನ್‌ಗಳಿಂದ ಗೆದ್ದಿತು.

ಬೃಹತ್ ಗುರಿ ಬೆನ್ನಟ್ಟಿದ್ದ ವಿದ್ಯಾನಿಕೇತನ 29.5 ಓವರ್‌ಗಳಲ್ಲಿ 63 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.

'ಕ್ರಿಕ್‌ಇನ್ಫೋ ಡಾಟ್ ಕಾಮ್' ಅಂಕಿಸಂಖ್ಯೆಗಳ ಅನ್ವಯ ಈ ಮೊದಲಿನ ದಾಖಲೆಯು (ಜೂನಿಯರ್ ವಿಭಾಗವೂ ಸೇರಿ) 546 ರನ್‌ಗಳಾಗಿತ್ತು. 2015ರಲ್ಲಿ ಮುಂಬೈನ ಕೆ.ಜಿ. ಗಾಂಧಿ ಇಂಗ್ಲಿಷ್ ಶಾಲೆಯ ಆಕಾಶ್ ಸಿಂಗ್ ಮತ್ತು ಪ್ರಣವ್ ಧನವಾಡೆ ಅವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ 546 ರನ್‌ ಸೇರಿಸಿದ್ದರು. ಆದರೆ ಆ ಪಂದ್ಯವು ಎರಡು ದಿನಗಳದ್ದಾಗಿತ್ತು. ಕೆಂಪು ಚೆಂಡಿನಲ್ಲಿ ಆಡಲಾಗಿತ್ತು.

ಸಂಕ್ಷಿಪ್ತ ಸ್ಕೋರು: ಗೋಪಾಲನ್ ನ್ಯಾಷನಲ್ ಸ್ಕೂಲ್: 50 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 549 (ಜಿ.ಕೆ. ಸಾಯಿವರುಣ್ ಔಟಾಗದೆ 247, ಜಿ. ಅರವಿಂದ್ ಅಜೇಯ 277) ವಿದ್ಯಾನಿಕೇತನ ಶಾಲೆ: 29.5 ಓವರ್‌ಗಳಲ್ಲಿ 63 (ಮಿಥಿಲ್ ಗೌಡ 24, ರಾಘವ್ ಅಗರವಾಲ್ 6ಕ್ಕೆ2, ಮಿಧಾಸ್ ಮುಕುಂದ್ 9ಕ್ಕೆ2, ಸುಹಾನ್ ಭಂಡಾರಿ 4ಕ್ಕೆ2 ಚಾರ್ವಿಕ್ 2ಕ್ಕೆ2) ಫಲಿತಾಂಶ: ಗೋಪಾಲನ್ ನ್ಯಾಷನಲ್ ಸ್ಕೂಲ್‌ಗೆ 486 ರನ್‌ಗಳ ಜಯ.