2013 ರ ಮುಜಾಫರ್‌ನಗರ ಗಲಭೆ ಪ್ರಕರಣ: ಬಿಜೆಪಿ ಶಾಸಕ ವಿಕ್ರಮ್ ಸೈನಿ ಸೇರಿ 11 ಮಂದಿಗೆ ಜೈಲು ಶಿಕ್ಷೆ

2013 ರ ಮುಜಾಫರ್‌ನಗರ ಗಲಭೆ ಪ್ರಕರಣ: ಬಿಜೆಪಿ ಶಾಸಕ ವಿಕ್ರಮ್ ಸೈನಿ ಸೇರಿ 11 ಮಂದಿಗೆ ಜೈಲು ಶಿಕ್ಷೆ

ವದೆಹಲಿ: 2013 ರ ಮುಜಾಫರ್‌ನಗರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ವಿಕ್ರಮ್ ಸೈನಿ ಮತ್ತು ಇತರ 11 ಮಂದಿಗೆ ವಿಶೇಷ ಸಂಸದ/ಶಾಸಕ ನ್ಯಾಯಾಲಯ ಮಂಗಳವಾರ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 10,000 ರೂ.ಗಳ ದಂಡ ವಿಧಿಸಿದೆ.

ಆದ್ರೆ, ಶಿಕ್ಷೆ ಪ್ರಕಟವಾದ ಬಳಿಕ, ಬಿಜೆಪಿ ಶಾಸಕ ವಿಕ್ರಮ್ ಸೈನಿ ಸೇರಿದಂತೆ ಎಲ್ಲಾ 11 ಅಪರಾಧಿಗಳಿಗೆ ನ್ಯಾಯಾಲಯದಿಂದಲೇ ಜಾಮೀನು ನೀಡಲಾಯಿತು.

ಏನಿದು ಪ್ರಕರಣ?

2013 ರ ಆಗಸ್ಟ್‌ನಲ್ಲಿ ಮುಜಾಫರ್‌ನಗರ ಜಿಲ್ಲೆಯ ಕಾವಲ್‌ ಗ್ರಾಮದಲ್ಲಿ ಗೌರವ್ ಮತ್ತು ಸಚಿನ್ ಎಂಬ ಇಬ್ಬರು ಯುವಕರ ಹತ್ಯೆಯಾಗಿತ್ತು. ಇದು ಮುಜಾಫರ್‌ನಗರ ಮತ್ತು ಪಕ್ಕದ ಪ್ರದೇಶಗಳಲ್ಲಿ ಗಲಭೆಗೆ ಕಾರಣವಾಯಿತು. ಗಲಭೆ ವೇಳೆ 60 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಸಾವಿರಾರು ಮುಸ್ಲಿಮ್‌ ಕುಟುಂಬಗಳು ಗ್ರಾಮ ತೊರೆದು ಬೇರೆಡೆಗೆ ಸ್ಥಳಾಂತರಗೊಂಡರು.

ಯುವಕರ ಹತ್ಯೆ ಬಳಿಕ ಪೊಲೀಸರು ಖತೌಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ವಿಕ್ರಮ್ ಸೈನಿ ಸೇರಿದಂತೆ 28 ಜನರ ವಿರುದ್ಧ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಈ ಪ್ರಕರಣದಲ್ಲಿ ಶಾಸಕ ವಿಕ್ರಮ್ ಸೈನಿ ಸೇರಿದಂತೆ 28 ಮಂದಿಯಲ್ಲಿ 11 ಮಂದಿಗೆ ಮುಜಾಫರ್‌ನಗರದ ಎಂಪಿ-ಎಂಎಲ್‌ಎ ನ್ಯಾಯಾಲಯ ತಲಾ ಎರಡು ವರ್ಷ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ, 15 ಮಂದಿಯನ್ನು ಸಾಕ್ಷಿ ಕೊರತೆಯಿಂದ ದೋಷಮುಕ್ತಗೊಳಿಸಿದೆ. ಪ್ರಕರಣದ ವಿಚಾರಣೆ ವೇಳೆ ಒಬ್ಬ ಆರೋಪಿ ಸಾವನ್ನಪ್ಪಿದ್ದ.

2013ರ ಮುಜಾಫರ್‌ನಗರ ಗಲಭೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರವು ಮೀರತ್ ವಲಯದ ಐದು ಜಿಲ್ಲೆಗಳಲ್ಲಿ 6,869 ಆರೋಪಿಗಳ ವಿರುದ್ಧ ಒಟ್ಟು 510 ಪ್ರಕರಣಗಳನ್ನು ದಾಖಲಿಸಿದೆ. ಆದರೆ, ಈ 510 ಪ್ರಕರಣಗಳಲ್ಲಿ 175 ಪ್ರಕರಣಗಳಿಗೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. 165 ರಲ್ಲಿ ಅಂತಿಮ ವರದಿಗಳನ್ನು ಸಲ್ಲಿಸಲಾಗಿದೆ ಮತ್ತು 170 ಪ್ರಕರಣಗಳನ್ನು ತೆಗೆದುಹಾಕಲಾಗಿದೆ ಎಂದು ಕಳೆದ ವರ್ಷ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿತ್ತು.

ಅದರ ನಂತರ, ರಾಜ್ಯ ಸರ್ಕಾರವು ಅಪರಾಧ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 321 ರ ಅಡಿಯಲ್ಲಿ 77 ಪ್ರಕರಣಗಳನ್ನು ಹಿಂತೆಗೆದುಕೊಂಡಿತು. ಸರ್ಕಾರದ ಆದೇಶಗಳು ಪ್ರಕರಣಗಳನ್ನು ಹಿಂಪಡೆಯಲು ಯಾವುದೇ ಕಾರಣಗಳನ್ನು ನೀಡಿಲ್ಲ ಮತ್ತು ಆಡಳಿತವು ಸಂಪೂರ್ಣ ಪರಿಗಣನೆಯ ನಂತರ ನಿರ್ದಿಷ್ಟ ಪ್ರಕರಣವನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಮಾತ್ರ ಹೇಳಿದೆ