ಪರಿಷತ್ ಚುನಾವಣೆ: ವಾಟ್ಸಾಪ್ ಗ್ರೂಪ್ನಲ್ಲಿ ಬಂಧಿಯಾದ ಗ್ರಾ.ಪಂ. ಸದಸ್ಯರು
ಚಿಕ್ಕಮಗಳೂರು, ವಿಧಾನ ಪರಿಷತ್ ಚುನಾವಣೆಯ ಕಣ ಕಾಫಿನಾಡಿನಲ್ಲಿ ರಂಗೇರಿದ್ದು, ಕಾಂಗ್ರೆಸ್, ಬಿಜೆಪಿ ನಡುವೆ ನೇರ ಹಣಾಹಣಿ ಉಂಟಾಗಿದೆ. ಎರಡು ಪಕ್ಷದ ಅಭ್ಯರ್ಥಿಗಳು ಹಾಗೂ ಮುಖಂಡರು ಗೆಲುವಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ಹಳ್ಳಿಹಳ್ಳಿಗೆ ತೆರಳಿ ಗ್ರಾ.ಪಂ.
ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡ ಅಭ್ಯರ್ಥಿಗಳು ವಾಟ್ಸಾಪ್ ಗ್ರೂಪ್ಗಳ ಮೂಲಕ ಗ್ರಾಮ ಪಂಚಾಯಿತಿ ಸದಸ್ಯರ ಮನವೊಲಿಕೆಗೆ ಆಸೆ ಆಮಿಷಗಳಿಗೆ, ಚರ್ಚೆ ಹಾಗೂ ಪ್ರಚಾರಕ್ಕೆ ವಾಟ್ಸಾಪ್ ವೇದಿಕೆಯಾಗುತ್ತಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧ್ಯಕ್ಷರು ನಿರ್ಣಾಯಕವಾಗಿದ್ದು, ಹಾಗಾಗಿ ಹೋಬಳಿ ಮಟ್ಟದಲ್ಲಿ ವಾಟ್ಸಾಪ್ ಗ್ರೂಪ್ಗಳನ್ನು ಮಾಡಿ ಆಯಾ ಹೋಬಳಿಯ ಗ್ರಾಮ ಪಂಚಾಯಿತಿ ಸದಸ್ಯರನ್ನು ಒಗ್ಗೂಡಿಸುವ ಪ್ರಯತ್ನ ಎರಡು ಪಕ್ಷಗಳ ಅಭ್ಯರ್ಥಿಗಳಿಂದ ನಡೆಯುತ್ತಿದೆ. ವಾಟ್ಸಾಪ್ ಗ್ರೂಪ್ಗಳಲ್ಲಿ ಆಸೆ, ಆಮಿಷ ಒಡ್ಡುವ ಕೆಲಸವೂ ಸಹ ನಡೆಯುತ್ತಿದೆ ಎನ್ನಲಾಗಿದ್ದು, ವಾಟ್ಸಾಪ್ ಈಗ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕೆ ಶೀಘ್ರದಲ್ಲಿ ಸದಸ್ಯರನ್ನು ತಲುಪಲು ಅನುಕೂಲವಾಗುವ ಜೊತೆಗೆ ಮತ್ತೊಂದು ರೀತಿಯಲ್ಲಿಯೂ ಅಭ್ಯರ್ಥಿಗಳಿಗೆ ಸಹಾಯಕವಾಗಲಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ.
ಚುನಾವಣೆಗಾಗಿಯೇ ಸಿಮ್ ಖರೀದಿ
ಹೋಬಳಿ ಮಟ್ಟದಲ್ಲಿ ವಾಟ್ಸಾಪ್ ಗ್ರೂಪ್ಗಳನ್ನು ರಚಿಸಲು ಆಯಾ ಹೋಬಳಿಯ ಪಕ್ಷದ ಪ್ರಮುಖ ಮುಖಂಡರಿಗೆ ಈ ಜವಾಬ್ದಾರಿ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಹೊಸ ಸಿಮ್ ಖರೀದಿಸಿ ಒಂದು ವಾಟ್ಸಾಪ್ ಗ್ರೂಪ್ ಮಾಡಿ ಆ ಮೂಲಕ ಗ್ರಾ.ಪಂ. ಸದಸ್ಯರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಮೊದಲು ತಮ್ಮ ಪಕ್ಷದ ನಿಷ್ಟಾವಂತ ಗ್ರಾ.ಪಂ. ಸದಸ್ಯರನ್ನು ಗ್ರೂಪ್ನಲ್ಲಿ ಸೇರಿಸಿದ ಬಳಿಕ ಅವರ ಮೂಲಕ ಇನ್ನಿತರ ಸದಸ್ಯರನ್ನು ಸೆಳೆದುಕೊಂಡು ನಂತರ ಅಲ್ಲಿ ಎಲ್ಲಾ ರೀತಿಯ ಚರ್ಚೆಗಳು ಸಹ ನಡೆಯುತ್ತಿವೆ ಎನ್ನಲಾಗಿದೆ.
ಜಾತಿ ಲೆಕ್ಕಾಚಾರ ಜೋರು
ವಿಧಾನ ಪರಿಷತ್ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರವೂ ಸಹ ಜೋರಾಗಿ ನಡೆಯತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಒಕ್ಕಲಿಗರು ಹಾಗೂ ಬಯಲು ಸೀಮೆಯ ಕುರುಬ ಸಮಾಜ ಹಾಗೂ ಹಿಂದುಳಿದ ವರ್ಗದ ಗ್ರಾ.ಪಂ. ಸದಸ್ಯರು ಯಾರ ಕೈಹಿಡಿಯುತ್ತಾರೆ ಎಂಬ ಕುತೂಹಲದೊಂದಿಗೆ ಅವರನ್ನು ಸೆಳೆಯಲು ಹರಸಾಹಸ ಶುರುವಾಗಿದೆ. ಮಲೆನಾಡಿನ ಒಕ್ಕಲಿಗ ಸಮಾಜ ಎಂ.ಕೆ. ಪ್ರಾಣೇಶ್ ಕೈ ಹಿಡಿದರೆ, ಬಯಲುಸೀಮೆ ಭಾಗದಲ್ಲಿ ಕುರುಬ ಸಮಾಜ ಹಾಗೂ ಹಿಂದುಳಿವ ವರ್ಗದ ಸದಸ್ಯರು ಗಾಯತ್ರಿ ಶಾಂತೇಗೌಡರ ಪರ ಇದ್ದಾರೆ ಎನ್ನಲಾಗಿದೆ. ಉಳಿದಂತೆ ಲಿಂಗಾಯಿತ ಸಮಾಜ ಆಯಾ ಪಕ್ಷದ ಅಭ್ಯರ್ಥಿಗಳ ಜೊತೆಗಿರಬಹುದು ಎಂಬ ಮಾತುಗಳು ನಾಯಕರ ವಲಯದಲ್ಲಿ ಕೇಳಿ ಬರುತ್ತಿದೆ.
ವೈಎಸ್ವಿ ದತ್ತ ಬೆಂಬಲ ಇನ್ನೂ ಗೌಪ್ಯ
ಕಡೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವೈಎಸ್ವಿ ದತ್ತ ಯಾರಿಗೆ ಬೆಂಬಲ ಸೂಚಿಸುತ್ತಾರೆ ಅಥವಾ ತಟಸ್ಥ ನಿಲುವು ಅನುಸರಿಸುತ್ತಾರಾ ಎಂಬುದು ಇನ್ನು ಕುತೂಹಲವಾಗಿ ಉಳಿದಿದೆ. ಕ್ಷೇತ್ರದಲ್ಲಿ 2 ಪುರಸಭೆ ಸೇರಿದಂತೆ ಗ್ರಾ.ಪಂ.ಗಳು ಒಳಗೊಂಡಂತೆ ಸುಮಾರು 100ಕ್ಕೂ ಹೆಚ್ಚು ಸದಸ್ಯರು ಜೆಡಿಎಸ್ ಹಾಗೂ ವೈಎಸ್ವಿ ದತ್ತ ಬೆಂಬಲಿಗರು ಇದ್ದಾರೆ. ಹೀಗಾಗಿ ದತ್ತ ನಿಲುವು ಸಹ ಅಭ್ಯರ್ಥಿಗಳಿಗೆ ಸಹಾಯವಾಗಲಿದ್ದು, ಜಾತ್ಯಾತೀತ ನಿಲುವಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸಲಿದ್ದಾರೆ ಎನ್ನಲಾಗಿದ್ದು, ದತ್ತ ಜೊತೆ ಹಲವು ಮುಖಂಡರು ಗೌಪ್ಯವಾಗಿ ಸಭೆಯನ್ನು ಸಹ ನಡೆಸಿದ್ದಾರೆ.
ಮತದಾರರಿಗೆ ಬೇಡಿಕೆ ಹೆಚ್ಚುವ ಕಾತುರ
ಚಿಂತಕರ ಚಾವಡಿ ಎಂದು ಕರೆಯುವ ವಿಧಾನ ಪರಿಷತ್ ಸದಸ್ಯರ ಆಯ್ಕೆಗೂ ಸಹ ಮತದಾರರಿಗೆ ಆಸೆ ಆಮಿಷ ಒಡ್ಡುವ ಮೂಲಕ ಮತ ಪಡೆಯಬೇಕು ಎಂಬುದು ಗೌಪ್ಯವಾಗಿ ಉಳಿದಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆಗೆ ಯಾವ ಅಭ್ಯರ್ಥಿಗಳು ಎಷ್ಟು ಹಣ ನೀಡುತ್ತಾರೆ ಎಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ಕಳೆದ ೩೦ ಸಾವಿರದ ವರೆಗೂ ಹಣ ನೀಡಲಾಗಿದೆ ಎನ್ನಲಾಗಿದ್ದು, ಈ ಬಾರಿ ಬೇಡಿಕೆ ಮತ್ತಷ್ಟು ಹೆಚ್ಚಾಗಬಹುದು ಎಂಬ ಲೆಕ್ಕಾಚಾರ ಮತದಾರರಲ್ಲಿ ಈಗಾಗಲೇ ಪ್ರಾರಂಭವಾಗಿದೆ ಎಂದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ಎಚ್.ಎಚ್. ದೇವರಾಜ್ ಕಾಂಗ್ರೆಸ್ಗೆ ವರವಾಗಲಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಪಕ್ಷದಲ್ಲಿನ ಗುಂಪುಗಾರಿಕೆಯಿಂದ ಬೇಸತ್ತು ದೇವರಾಜ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದು, ಡಿ.3ರಂದು ತಮ್ಮ ನೂರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರಲಿದ್ದಾರೆ. ಹಲವು ದಶಕಗಳ ಕಾಲ ಹೋರಾಟ ಹಾಗೂ ರಾಜಕೀಯದಲ್ಲಿರುವ ದೇವರಾಜ್ ಸಹ ಕಾಂಗ್ರೆಸ್ಗೆ ಈಗ ವರದಾನವಾಗಲಿದ್ದಾರೆ ಎನ್ನಲಾಗಿದೆ.
ಅಭ್ಯರ್ಥಿ ಗೆಲುವಿಗೆ ಒಂದಾದ ಕೈ ನಾಯಕರು
ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ನಲ್ಲಿ ಪ್ರಮುಖ ನಾಯಕರ ನಡುವಿನ ಹೊಂದಾಣಿಕೆಯ ಕೊರತೆ ವಿರೋಧ ಪಕ್ಷಗಳಿಗೆ ಲಾಭದಾಯಕವಾಗಿತ್ತು. ಆದರೆ ಈಗ ರಾಜ್ಯ ನಾಯಕರ ಖಡಕ್ ಆದೇಶದ ಮೇರೆಗೆ ಹೊಂದಾಣಿಕೆಯ ಮಂತ್ರ ಪಠಿಸಿ ತಮ್ಮ ಅಭ್ಯರ್ಥಿಯ ಗೆಲುವಿಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ಈ ಹೊಂದಾಣಿಕೆ ಮತದಾನ ಮುಗಿಯುವವರೆಗೂ ಮುಂದವರೆದರೆ ಇದು ಕಾಂಗ್ರೆಸ್ಗೆ ಮತ್ತಷ್ಟು ಲಾಭವಾಗುತ್ತದೆ ಎಂಬುದು ರಾಜಕೀಯ ವಲಯದಿಂದ ಕೇಳಿ ಬರುತ್ತಿದೆ.