ನಿವಾಸದ ಮೇಲೆ ಕಲ್ಲು ತೂರಾಟ ಪ್ರಕರಣದ ಕುರಿತು ಮಾಜಿ ಸಿಎಂ 'BSY' ಹೇಳಿದ್ದೇನು..?
ಶಿವಮೊಗ್ಗ : ಶಿಕಾರಿಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಯಡಿಯೂರಪ್ಪ ತಪ್ಪು ಗ್ರಹಿಕೆಯಿಂದ ಇಂತಹ ಘಟನೆ ನಡೆದಿದೆ, ಬಂಜಾರಾ ಸಮುದಾಯದ ಹಿರಿಯರನ್ನು ಕರೆದು ಮಾತನಾಡುತ್ತೇನೆ.
ಶಿಕಾರಿಪುರ ಶಾಂತಿಯುತವಾದ ತಾಲೂಕು, ಏಕಾ ಏಕಿ ನಮ್ಮ ಮನೆ ಮೇಲೆ ದಾಳಿ ನಡೆದಿದೆ. ಇದರಿಂದ ಬಹಳ ನೋವಾಗಿದೆ. ಬಂಜಾರಾ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸುತ್ತೇನೆ, ಯಾವುದೇ ಕಾರಣಕ್ಕೂ ಸಮಾಜ ಘಾತುಕ ಶಕ್ತಿಯ ಮಾತನ್ನು ಕೇಳಬೇಡಿ. ನಿಮ್ಮ ಸಮಾಜಕ್ಕೆ ನ್ಯಾಯ ಒದಗಿಸುವಲ್ಲಿ ಕ್ರಮ ಕೈಗೊಳ್ಳುತ್ತೇನೆ, ಬಂಜಾರ ಸಮುದಾಯದ ಸಮಸ್ಯೆ ಬಗ್ಗೆ ನಾನು ವಿಜಯೇಂದ್ರ ಇಬ್ಬರೂ ಚರ್ಚೆ ನಡೆಸಲು ಸಿದ್ದನಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು. ನಿಮ್ಮ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಗಲಭೆ ಪ್ರಕರಣ ಸಂಬಂಧಿಸಿದಂತೆ ಯಾರನ್ನೂ ಬಂಧಿಸಬೇಡಿ ಎಂದು ಪೊಲೀಸರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ಒಳಮೀಸಲಾತಿ ಜಾರಿಗೆ ಬಂಜಾರ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.ಯಡಿಯೂರಪ್ಪ ಮನೆಯ ಕಿಟಕಿ ಗಾಜು ಒಡೆದು ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದ್ದು, ತಳ್ಳಾಟ ನೂಕಾಟ ಉಂಟಾಗಿದೆ. ಹೀಗಾಗಿ ಪೊಲೀಸರ ಮೇಲೆಯೇ ಪ್ರತಿಭಟನಾಕಾರರು ಚಪ್ಪಲಿ, ಕಲ್ಲು ತೂರಿದ್ದಾರೆ. ಘಟನೆಯಲ್ಲಿ ಕೆಲವು ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ಮಾಡಲಾಗಿದೆ. ಶಿಕಾರಿಪುರ ತಾಲೂಕು ಕಚೇರಿ ಎದುರು ಪ್ರತಿಭಟನೆ ಮುಂದುವರೆದಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ರವಾನೆ ಮಾಡಲಾಗಿದೆ.