ನಾನು ಭಾರತೀಯ. ಮನುವಾದಿಗಳು ನಮ್ಮನ್ನು ಸಿಕ್ಕಿ ಹಾಕಿಸುವ ಕೆಲಸ ಮಾಡ್ತಿದ್ದಾರೆ; ಸತೀಶ್ ಜಾರಕಿಹೊಳಿ

ನಾನು ಭಾರತೀಯ. ಮನುವಾದಿಗಳು ನಮ್ಮನ್ನು ಸಿಕ್ಕಿ ಹಾಕಿಸುವ ಕೆಲಸ ಮಾಡ್ತಿದ್ದಾರೆ; ಸತೀಶ್ ಜಾರಕಿಹೊಳಿ

ಬೆಳಗಾವಿ: ಹಿಂದೂ ಎಂಬ ಪದ ಅಶ್ಲೀಲವಾಗಿದೆ ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತು ವಿವಾದದ ಸ್ವರೂಪ ಪಡೆದುಕೊಂಡಿತ್ತು, ಇದೀಗ ಮತ್ತೆ ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.

ನನ್ನ ಹೇಳಿಕೆ ಕುರಿತು ಯಾರು ಬೇಕಾದರೂ ಚರ್ಚೆಗೆ ಬರಲಿ.

ನನ್ನ ಹೇಳಿಕೆ ಸುಳ್ಳು ಎಂದು ಸಾಬೀತು ಪಡಿಸಿದಲ್ಲಿ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಈ ವೇಳೆ ನೀವು ಹಿಂದೂನಾ ಅಥವಾ ಬೇರೆನಾ ಎಂಬ ಪ್ರಶ್ನೆ ಎದುರಾಗುತ್ತಿದ್ದಂತೆ, ನಾನು ಭಾರತೀಯ ಎಂದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಅಲ್ಲದೆ ನಾನು ಯಾವುದರ ಪರವಾಗಿಯೂ ಇಲ್ಲ. ನಾನು ಯಾವತ್ತಿಗೂ ಮನುಷ್ಯರ ಪರವಾಗಿ ಇದ್ದೇನೆ ಎಂದರು.

ನನ್ನ ಹೇಳಿಕೆಗೆ ಬಿಜೆಪಿ ನಾಯಕರು ವಿರೋಧ ಮಾಡುತ್ತಿದ್ದಾರೆ. ಅವರದ್ದೇ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಹಿಂದೆಯೂ ನನ್ನನ್ನು ಹಲವು ಬಾರಿ ಕಟ್ಟಿ ಹಾಕುವ ಪ್ರಯತ್ನ ಮಾಡಿದ್ದಾರೆ. ನನ್ನ ಹೇಳಿಕೆಯ ಬಗ್ಗೆ ಓದಿ ನೋಡಿ, ಎಲ್ಲರಿಗೂ ಸತ್ಯ ಅರಿವಾಗುತ್ತದೆ. ಅನಾವಶ್ಯಕ ಗೊಂದಲ ಸೃಷ್ಟಿಸಬೇಡಿ ಎಂದು ಹೇಳಿದರು.

ಮನುವಾದಿಗಳು ನಮ್ಮನ್ನ ಸಿಕ್ಕಿ ಹಾಕಿಸುವ ಕೆಲಸ ಮಾಡ್ತಿದ್ದಾರೆ. ನಾನು ಕ್ಷಮೆ ಕೇಳುವುದಿಲ್ಲ. ಸಿಎಂ ಅವರು ಬೇಕಾದರೆ ಕಮಿಟಿ ಮಾಡಿ ನನ್ನನ್ನು ತನಿಖೆ ಮಾಡಲಿ. ಆ ನಂತರ ನಾನು ರಾಜೀನಾಮೆಗೆ ಸಿದ್ಧನಿದ್ದೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಹಿಂದೂ ಶಬ್ದದ ಕುರಿತು ಕೆಟ್ಟದ್ದು ಇರುವ ಬಗ್ಗೆ ನಾನು ಮಾತನಾಡಿದ್ದೇನೆ. ಈ ವಿಚಾರದ ಬಗ್ಗೆ ರಣದೀಪ್ ಸುರ್ಜೇವಾಲ ಕರೆ ಮಾಡಿ, ನಿಮ್ಮ ಬಳಿ ದಾಖಲೆ ಇದ್ದರೆ ಮುಂದುವರೆಸಿ, ಇಲ್ಲವೇ ಈ ವಿಚಾರ ಕೈ ಬಿಡಿ ಎಂದಿದ್ದಾರೆ. ಚುನಾವಣೆಗೂ ಇದಕ್ಕೂ ಸಂಬಂಧ ಇಲ್ಲ. ನಾನು ಚುನಾವಣೆ ದೃಷ್ಟಿಯಿಂದ ಈ ಹೇಳಿಕೆ ನೀಡಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.