ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ; ದೂರು ದಾಖಲಿಸಿದ ರೂಪೇಶ್ ಶೆಟ್ಟಿ ಕುಟುಂಬಸ್ಥರು

ಮಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಒಂದರಲ್ಲಿ ಮಂಗಳೂರು ಮೂಲದ ರೂಪೇಶ್ ಶೆಟ್ಟಿ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ. ಇದೀಗ ರಿಯಾಲಿಟಿ ಶೋ ವೇಳೆ ರೂಪೇಶ್ ಶೆಟ್ಟಿ ಅವರಾಡಿದ ಮಾತುಗಳನ್ನು ಮೂಲವಾಗಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ವಿವಾದ ಎಬ್ಬಿಸುತ್ತಿದ್ದಾರೆ.
ರಿಯಾಲಿಟಿ ಶೋನಲ್ಲಿ ರೂಪೇಶ್ ಆಡಿದ ಮಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದಷ್ಟೇ ಅಲ್ಲದೇ, ವಿರೋಧಿಸುವ ಭರದಲ್ಲಿ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂಬಂಧ ಮಂಗಳೂರಿನಲ್ಲಿ ರೂಪೇಶ್ ಶೆಟ್ಟಿ ಕುಟುಂಬಸ್ಥರು ದೂರು ನೀಡಿದ್ದಾರೆ.
ರೂಪೇಶ್ ಶೆಟ್ಟಿ ಮನೆಯವರು ನೀಡಿರುವ ದೂರಿನ ಬಗ್ಗೆ ಮಾತನಾಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ರೂಪೇಶ್ ಶೆಟ್ಟಿಗೆ ಬೆದರಿಕೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಮನೆಯವರು ಬಂದು ದೂರು ನೀಡಿದ್ದಾರೆ. ಈ ದೂರನ್ನು ಸೈಬರ್ ಕ್ರೈಂ ಠಾಣೆಗೆ ವರ್ಗಾಯಿಸಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು, ಎಫ್ಐಆರ್ ದಾಖಲು ಮಾಡಲಾಗುವುದು. ನಂತರ ತನಿಖೆ ಮುಂದುವರಿಸುತ್ತೇವೆ ಎಂದಿದ್ದಾರೆ.