ದೇವೇಗೌಡರನ್ನ ಇವರೆಲ್ಲಾ ಉತ್ಸವ ಮೂರ್ತಿ ಮಾಡ್ಕೊಂಬಿಟ್ರು" : ರೇವಣ್ಣ ವಿರುದ್ಧ ರಾಮಸ್ವಾಮಿ ವಾಗ್ದಾಳಿ

ಹಾಸನ : ರಾಮಸ್ವಾಮಿ ಕೆಟ್ಟವರು ಅವರಿಗೆ ಟಿಕೆಟ್ ಕೊಡಬೇಡಿ ಎಂದು ಜನರಿಂದ ಹೇಳಿಸಿದ್ರು. ಮೈಕ್ ಹಾಕಿಕೊಂಡು ಅವರ ಮನೆಯೊಳಗೆ ಹೋಗಿ ಮಾತಾಡೋಕೆ ಸಾಧ್ಯ ಇದೆನಾ? ಎಂದು ಪರೋಕ್ಷವಾಗಿ ಮಾಜಿ ಶಾಸಕ ಹೆಚ್.ಡಿ ರೇವಣ್ಣ ಕುಟುಂಬದ ವಿರುದ್ಧ ಶಾಸಕ ಎ.ಟಿ ರಾಮಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನಾನು ದೇವೇಗೌಡರನ್ನ ಕಾರ್ಯಕ್ರಮಕ್ಕೆ ಕರೆಯೋದಕ್ಕೆ ಹೋದಾಗ ರಾಜಕೀಯ ಮಾತಾಡೋಕೆ ಶುರು ಮಾಡಿದರು. ಆರೋಗ್ಯ ಕಾಪಾಡಿಕೊಳ್ಳಿ ಇನ್ನೊಂದು ದಿನ ಮಾತಾಡೋಣ ಎಂದೆ. ನನ್ನ ಕೈ ಹಿಡಿದುಕೊಂಡ್ರು ನಿಮಗೆ ಏನು ಕಿರುಕುಳ ಕೊಡ್ತಿದ್ದಾರೆ, ಏನು ಅನ್ಯಾಯ ಆಗ್ತಿದೆ ನನಗೆ ಗೊತ್ತು. ನಾನು ಬದುಕಿರೋ ವರೆಗೆ ಅನ್ಯಾಯ ಆಗೋದಕ್ಕೆ ಬಿಡೊಲ್ಲ ಅಂದಿದ್ರು ಎಂದು ಹೇಳಿದ್ದಾರೆ.
ನಾನು ಕರೆದ ಕಾರ್ಯಕ್ರಮಕ್ಕೆ ದೇವೇಗೌಡರ ಟೂರ್ ಪ್ಲಾನ್ ಆಗಿತ್ತು. ಬರೋದನ್ನ ತಡೆದರು. ಇವರೆಲ್ಲಾ ಪಾಪ ಅವರನ್ನ ಉತ್ಸವ ಮೂರ್ತಿ ಮಾಡ್ಕೊಂಬಿಟ್ರು. ಅಂತಹ ಮುತ್ಸದಿ ರಾಜಕಾರಣಿಯನ್ನ ಮೂಲೆಗುಂಪು ಮಾಡಿದ್ದು ನನಗೆ ನೋವಾಗಿದೆ. ಅವರ ಮಾತಿಗೆ ಕಿಮ್ಮತ್ತು ಕೊಡ್ತಿದ್ದಾರಾ ಇವರು? ಎಂದು ಪ್ರಶ್ನಿಸಿದ್ದಾರೆ.
ಅವರನ್ನ ಜಿಲ್ಲೆಯಿಂದ ಹೊರ ದಬ್ಬಿದ್ರು. ಹಾಸನದ ಚನ್ನಪಟ್ಟಣದಲ್ಲಿ ಲೋಕಸಭಾ ಚುನಾವಣೆ ಬಗ್ಗೆ ಪೂರ್ವಭಾವಿ ಸಭೆ ಆಯ್ತು. ಎಲ್ಲರೂ ಪ್ರಜ್ವಲ್ ರೇವಣ್ಣ ಅಂತಾ ಹೇಳಿದ್ರು, ನಾನು ಹೇಳಲಿಲ್ಲ. ನನ್ನ ಮೇಲೆ ಹಗೆತನ ಅಲ್ಲಿಂದಲೇ ಶುರುವಾಯ್ತು. ದೇವೇಗೌಡರು ನಿವೃತ್ತಿ ಆಗ್ತೀನಿ ಅಂದಿದ್ರೆ ನಾನು ಹೆಸರು ಹೇಳ್ತಿದ್ದೆ. ಅವರು ನಿಂತ್ಕೊಳ್ತಿನಿ ಅಂತಿರುವಾಗ ಜಿಲ್ಲೆಯಿಂದ ಹೊರದಬ್ಬಿ, ಮನೆಯಿಂದ ಹೊರದಬ್ಬಿದ್ರು. ಇವರು ಹೋಗ್ಬೇಕಾಗಿತ್ತು, ಕಾದಾಡಬೇಕಾಗಿತ್ತು. ಇದರಿಂದ ಪಕ್ಷಕ್ಕೂ ನಷ್ಟ ಆಯ್ತೋ ಇಲ್ವೋ ಎಂದಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ನಮ್ಮ ಶಾಸಕರ ಬಳಿ ಅವರಿಗೆ ಟಿಕೆಟ್ ಕೊಡಲ್ಲ ಎಂದು ಹೇಳಿದ್ದರು. ಇವೆಲ್ಲ ಪೂರ್ವ ನಿರ್ಧಾರಿತ ತೀರ್ಮಾನಗಳು. ಪ್ರಜ್ವಲ್ ರೇವಣ್ಣ ವಿರುದ್ಧ ಆಸ್ತಿ ಘೋಷಣೆ ವಿಚಾರವಾಗಿ ಕೋರ್ಟ್ ಕೇಸ್ ನಡೆಯುತ್ತಿದೆ. ತೀವ್ರತರವಾದ ವಿಚಾರಣೆ ನಡೆಯುತ್ತಿದೆ. ಶಿಕ್ಷೆ ಆಗುತ್ತದೆ ಎಂಬ ಸಂದರ್ಭಕ್ಕೆ ಬಂದಿತ್ತು. ಕೇಸ್ನ್ನು ರಾಜಿ ಮಾಡ್ಕೊಳ್ಳಿಕ್ಕಾಗಿ ಸ್ವಾರ್ಥಕ್ಕಾಗಿ, ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದು, ಅವರಿಗೆ ಬಿಜೆಪಿಯಲ್ಲಿ ಕಾಂಗ್ರೆಸ್ ನಲ್ಲಿ ಟಿಕೆಟ್ ಕೊಡಲ್ಲ ಅಂದ್ರು ಎಂದಿದ್ದಾರೆ.
ಇವರ ಸ್ವಾರ್ಥಕ್ಕಾಗಿ ನಮ್ಮ ಜನರು, ರೈತರನ್ನು ಬಲಿ ಕೊಡಲಿಕ್ಕೆ ಹೊರಟಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇಂತಹ ಅನ್ಯಾಯಗಳಾದಾಗ ಬೆಂಕಿ ಉಂಡೆಗಳಾಗಬೇಕು ಎಂದು ರೇವಣ್ಣ ಕುಟುಂಬದ ವಿರುದ್ಧ ರಾಮಸ್ವಾಮಿ ಕೆಂಡಾಮಂಡಲರಾದರು. ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದದ್ದಾರೆ.