ದಹಿ' ಎಂದು ಬಳಸಲು ಕೆಎಂಎಫ್‌ಗೆ ಸೂಚನೆ: ಸ್ಟಾಲಿನ್ ಕಿಡಿ

ದಹಿ' ಎಂದು ಬಳಸಲು ಕೆಎಂಎಫ್‌ಗೆ ಸೂಚನೆ: ಸ್ಟಾಲಿನ್ ಕಿಡಿ

ಚೆನ್ನೈ: ಮೊಸರಿನ ಪೊಟ್ಟಣದ ಮೇಲೆ 'ದಹಿ' ಎಂದು ಉಲ್ಲೇಖಿಸಬೇಕಾಗಿ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌)ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ನೀಡಿರುವ ಸೂಚನೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಖಂಡಿಸಿದ್ದಾರೆ.

ಇದಕ್ಕೆ ಕಾರಣರಾದವರನ್ನು ದಕ್ಷಿಣದಿಂದ ಹೊರಗಟ್ಟಬೇಕು ಎಂದು ಅವರು ಗುಡುಗಿದ್ದಾರೆ.

'ದಹಿ' ಬಳಕೆಗೆ ಸಂಬಂಧಿಸಿದಂತೆ ಎಫ್‌ಎಸ್‌ಎಸ್‌ಎಐನಿಂದ ಕೆಎಂಎಫ್‌ಗೆ ಬಂದಿರುವ ಸೂಚನೆ ಬಗ್ಗೆ ಹಲವು ಸುದ್ದಿ ಮಾಧ್ಯಮಗಳು ವರದಿ ಪ್ರಕಟಿಸಿದ್ದವು. ವರದಿಯನ್ನು ಸ್ಟಾಲಿನ್‌ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

'ಅಂಕೆ ಇಲ್ಲದ ಹಿಂದಿ ಹೇರಿಕೆಯು ಮೊಸರಿನ ಪ್ಯಾಕೆಟ್‌ಗಳ ವರೆಗೆ ಬಂದಿದೆ. ನಮ್ಮದೇ ರಾಜ್ಯಗಳಲ್ಲಿ ತಮಿಳು ಮತ್ತು ಕನ್ನಡಕ್ಕೆ ಹಿನ್ನಡೆಯುಂಟು ಮಾಡುತ್ತಿದೆ. ಇದಕ್ಕೆ ಜವಾಬ್ದಾರರಾದವರನ್ನು ದಕ್ಷಿಣದಿಂದ ಶಾಶ್ವತವಾಗಿ ಹೊರಹಾಕಬೇಕು' ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ. ‌

ಹಾಲಿನ ಉತ್ಪನ್ನಗಳ ಪೊಟ್ಟಣಗಳ ಮೇಲೆ ಹಿಂದಿಯಲ್ಲಿ ಉಲ್ಲೇಖವಿರಬೇಕು. ನಂತರ ಸ್ಥಳೀಯ ಭಾಷೆಯಲ್ಲಿ ಉಲ್ಲೇಖಿಸಬೇಕೆಂದು ಎಫ್‌ಎಸ್‌ಎಸ್‌ಎಐ ಇತ್ತೀಚೆಗೆ ಕೆಎಂಎಫ್‌ಗೆ ಸೂಚನೆ ನೀಡಿತ್ತು. ಇದು ಕನ್ನಡ ಹೋರಾಟಗಾರರ ಆಕ್ರೋಶಕ್ಕೂ ಕಾರಣವಾಗಿತ್ತು.