ತೇಜಸ್ವಿ ಸೂರ್ಯ ಆಕಸ್ಮಿಕವಾಗಿ ಡೋರ್‌ ಓಪನ್‌ ಮಾಡಿದ್ದರು!: ಸಚಿವ ಸಿಂದಿಯಾ ಸ್ಪಷ್ಟನೆ

ತೇಜಸ್ವಿ ಸೂರ್ಯ ಆಕಸ್ಮಿಕವಾಗಿ ಡೋರ್‌ ಓಪನ್‌ ಮಾಡಿದ್ದರು!: ಸಚಿವ ಸಿಂದಿಯಾ ಸ್ಪಷ್ಟನೆ

ವದೆಹಲಿ: ಕಳೆದ ತಿಂಗಳು ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆರೆದಿದ್ದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಎಂಬುದನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಒಪ್ಪಿಕೊಂಡಿದ್ದಾರೆ. ಅಲ್ಲದೇ, ಬುಧವಾರ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಂದಿಯಾ, “ಅಂದು ಆಕಸ್ಮಿಕವಾಗಿ ವಿಮಾನದ ಬಾಗಿಲು ಓಪನ್‌ ಆಯಿತು.

ಕೂಡಲೇ ಎಲ್ಲ ರೀತಿಯಲ್ಲೂ ಪರಿಶೀಲನೆ ನಡೆಸಿದ ಬಳಿಕವೇ ಟೇಕಾಫ್ಗೆ ಅವಕಾಶ ಕಲ್ಪಿಸಲಾಯಿತು. ಅಲ್ಲದೇ, ತೇಜಸ್ವಿ ಸೂರ್ಯ ಅವರೇ ಈ ವಿಚಾರವನ್ನು ಗಮನಕ್ಕೆ ತಂದು, ಕ್ಷಮಾಪಣೆ ಕೋರಿದರು’ ಎಂದು ಹೇಳಿದ್ದಾರೆ.

“ಸಂಸದ ತೇಜಸ್ವಿ ಸೂರ್ಯ ಅವರು ಇಂಥ ಗಂಭೀರ ಪ್ರಮಾದ ಮಾಡಿದ್ದರೂ ಅವರು ಕ್ಷಮೆ ಕೇಳಿದೊಡನೆ ಬಿಟ್ಟುಬಿಟ್ಟಿದ್ದೇಕೆ? ಅವರ ವಿರುದ್ಧ ಕ್ರಮ ಕೈಗೊಂಡಿಲ್ಲವೇಕೆ’ ಎಂದು ಪ್ರತಿಪಕ್ಷಗಳ ಹಲವು ನಾಯಕರು ಹಾಗೂ ಜನಸಾಮಾನ್ಯರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ ಬೆನ್ನಲ್ಲೇ ಸಚಿವ ಸಿಂದಿಯಾ ಈ ಸ್ಪಷ್ಟನೆ ನೀಡಿದ್ದಾರೆ. ಬುಧವಾರ ಟ್ವಿಟರ್‌ನಲ್ಲಿ “ತೇಜಸ್ವಿ ಸೂರ್ಯ’ ಎಂಬ ಹ್ಯಾಷ್‌ಟ್ಯಾಗ್‌ ಟ್ರೆಂಡಿಂಗ್‌ ಕೂಡ ಆಗಿತ್ತು.

“ಆಟವಾಡುವ ಮಕ್ಕಳಿಗೆ ಉನ್ನತ ಸ್ಥಾನಮಾನ ಕೊಟ್ಟರೆ ಏನಾಗಬಹುದು ಎನ್ನುವುದಕ್ಕೆ ತೇಜಸ್ವಿ ಸೂರ್ಯ ಅವರೇ ಅತ್ಯುತ್ತಮ ಉದಾಹರಣೆ. ಪ್ರಯಾಣಿಕರ ಜೀವದ ಜೊತೆ ಆಟವಾಡುವುದು ಎಷ್ಟು ಸರಿ? ಸಂಸದರ ಉದ್ದೇಶ ಏನಿತ್ತು’ ಎಂದು ಕರ್ನಾಟಕ ಕಾಂಗ್ರೆಸ್‌ ಪ್ರಶ್ನಿಸಿತ್ತು.