ತಮಿಳಿನ ಸೋಲೇ ಇಲ್ಲದ ನಿರ್ದೇಶಕನ ಜತೆ ಕಿಚ್ಚ ಸುದೀಪ್ ಮುಂದಿನ ಚಿತ್ರ; ಬ್ಲಾಕ್‌ಬಸ್ಟರ್ ಖಚಿತ

ತಮಿಳಿನ ಸೋಲೇ ಇಲ್ಲದ ನಿರ್ದೇಶಕನ ಜತೆ ಕಿಚ್ಚ ಸುದೀಪ್ ಮುಂದಿನ ಚಿತ್ರ; ಬ್ಲಾಕ್‌ಬಸ್ಟರ್ ಖಚಿತ

ನ್ನಡದ ಸ್ಟಾರ್‌ಗಳು ನಟಿಸಲಿರುವ ಮುಂದಿನ ನಾಲ್ಕೈದು ಚಿತ್ರಗಳು ಯಾವುವು ಎಂಬ ಮಾಹಿತಿ ಅಭಿಮಾನಿಗಳಿಗೆ ಸುಲಭವಾಗಿ ಲಭಿಸಿಬಿಡುತ್ತೆ. ತಮ್ಮ ನೆಚ್ಚಿನ ನಟರ ಹುಟ್ಟುಹಬ್ಬಗಳು ಬಂತೆಂದರೆ ಸಾಕು ಆ ದಿನದಂದೇ ಆ ನಟನ ಜತೆ ಚಿತ್ರ ಮಾಡಲಿರುವ ನಿರ್ದೇಶಕರು ಹಾಗೂ ನಿರ್ಮಾಪಕರು ಪೋಸ್ಟರ್ ಹಂಚಿಕೊಂಡು ಅಭಿಮಾನಿಗಳಿಗೆ ತಿಳಿಸಿಬಿಡುತ್ತಾರೆ

ಆದರೆ ಇದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ವಿಚಾರದಲ್ಲಿ ನಡೆಯುತ್ತಿಲ್ಲ. ಈ ಇಬ್ಬರೂ ಸಹ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈಗಾಗಲೇ ಸ್ಟಾರ್‌ಗಳಾಗಿ ಬೆಳೆದಿದ್ದು ತಮ್ಮ ಮೇಲೆ ಅಭಿಮಾನಿಗಳಿಗೆ ಹಾಗೂ ಸಿನಿ ರಸಿಕರಿಗೆ ದೊಡ್ಡ ಮಟ್ಟದ ನಿರೀಕ್ಷೆ ಇರುವ ಕಾರಣ ಕಥೆ ಆಯ್ಕೆ ಮಾಡುವಲ್ಲಿ ಭಾರೀ ಜಾಗರೂಕತೆ ವಹಿಸುತ್ತಿದ್ದಾರೆ. ಹೀಗಾಗಿಯೇ ಇವರ ಮುಂದಿನ ಚಿತ್ರಗಳ ಘೋಷಣೆ ತಡವಾಗುತ್ತಿದೆ ಎನ್ನಬಹುದಾಗಿದೆ.

ಇನ್ನು ಯಶ್ ತಮ್ಮ ಮುಂದಿನ ಚಿತ್ರವನ್ನು ಯಾರ ಜತೆ ಮಾಡಬಹುದು ಎಂಬ ಚರ್ಚೆಯಲ್ಲಿ ಹಲವು ನಿರ್ದೇಶಕರ ಹೆಸರುಗಳು ಕೇಳಿಬಂದರೆ, ಕಿಚ್ಚ ಸುದೀಪ್ ವಿಷಯದಲ್ಲೂ ಸಹ ಇದೇ ರೀತಿ ನಡೆಯುತ್ತಿದೆ. ಆದರೆ ಈ ಪೈಕಿ ಯಾವ ಚಿತ್ರವೂ ಸಹ ಘೋಷಣೆಯಾಗದೇ ಅಭಿಮಾನಿಗಳ ಕಾಯುವಿಕೆ ಮುಂದುವರಿದಿದೆ. ಕಿಚ್ಚ ಸುದೀಪ್ ಜತೆ ತಮಿಳಿನ ಖ್ಯಾತ ನಿರ್ದೇಶಕರೊಬ್ಬರು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕಳೆದ ವರ್ಷದಲ್ಲೇ ಕೇಳಿ ಬಂದಿತ್ತು. ಆ ಸುದ್ದಿ ಬಗ್ಗೆ ಇದೀಗ ಮತ್ತಷ್ಟು ಮಾಹಿತಿಗಳು ಹೊರಬಿದ್ದಿದ್ದು, ಕಿಚ್ಚನ ಜತೆ ಸಿನಿಮಾ ಮಾಡುವುದು ಖಚಿತ, ಚಿತ್ರದ ಸ್ಕ್ರಿಪ್ಟ್ ವರ್ಕ್ ಭರದಿಂದ ಸಾಗುತ್ತಿದೆ ಎಂಬ ವಿಷಯಗಳನ್ನು ನಿರ್ದೇಶಕನ ಆಪ್ತ ವಲಯ ಬಿಟ್ಟುಕೊಟ್ಟಿದೆ.ಹೌದು, ಕಳೆದ ವರ್ಷದಿಂದ ಕಿಚ್ಚ ಸುದೀಪ್ ಹಾಗೂ ತಮಿಳಿನ ನಿರ್ದೇಶಕ ವೆಂಕಟ್ ಪ್ರಭು ಕಾಂಬಿನೇಶನ್‌ನಲ್ಲಿ ಚಿತ್ರ ಮೂಡಿ ಬರಲಿದೆ ಎಂಬ ಮಾಹಿತಿ ಹರಿದಾಡುತ್ತಲೇ ಇದೆ. ಇನ್ನು ಕೆಲ ದಿನಗಳ ಹಿಂದಷ್ಟೇ ಸುದೀಪ್ ಮನೆಗೆ ವೆಂಕಟ್ ಪ್ರಭು ಭೇಟಿ ನೀಡಿದ್ದ ಸಮಯದಲ್ಲಿ ಚಿತ್ರದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿತ್ತು. ಸದ್ಯ ವೆಂಕಟ್ ಪ್ರಭು ತೆಲುಗಿನಲ್ಲಿ ನಾಗ ಚೈತನ್ಯ ನಟನೆಯ ಕಸ್ಟಡಿ ಎಂಬ ಚಿತ್ರವನ್ನು ನಿರ್ದೇಶಿಸಿ ಮುಗಿಸಿದ್ದು, ಕಿಚ್ಚನ ಮುಂದಿನ ಚಿತ್ರಕ್ಕಾಗಿ ಕಥೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ.

ಇನ್ನು ವೆಂಕಟ್ ಪ್ರಭು ಇಲ್ಲಿಯವರೆಗೂ ನಿರ್ದೇಶಿಸಿರುವ ಚಿತ್ರಗಳು ಬ್ಲಾಕ್‌ಬಸ್ಟರ್, ಸೂಪರ್ ಹಿಟ್ ಹಾಗೂ ಸಾಧಾರಣಕ್ಕಿಂತ ಉತ್ತಮ ಎನಿಸಿಕೊಂಡಿವೆಯೋ ಹೊರತು ಯಾವ ಚಿತ್ರವೂ ಸಹ ಫ್ಲಾಪ್ ಆಗಿದ್ದೇ ಇಲ್ಲ. ಮೊದಲಿಗೆ 2007ರಲ್ಲಿ ಬಿಡುಗಡೆಯಾದ ಚೆನ್ನೈ 600028 ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ ವೆಂಕಟ್‌ ಪ್ರಭು ಮೊದಲ ಎಸೆತದಲ್ಲೇ ಸಿಕ್ಸರ್ ಚಚ್ಚಿದ್ದರು. ಬಳಿಕ ಸರೋಜಾ ಚಿತ್ರದ ಮೂಲಕ ಮತ್ತೆ ಗೆದ್ದ ವೆಂಕಟ್ ಪ್ರಭು ನಿರ್ದೇಶನದ ಮೂರನೇ ಚಿತ್ರ ಗೋವಾ ಸಾಧಾರಣಕ್ಕಿಂತ ಉತ್ತಮ ಎನಿಸಿಕೊಂಡಿತು. ನಂತರ ಬಿಡುಗಡೆಗೊಂಡ ಅಜಿತ್ ಕುಮಾರ್ ನಟನೆಯ ಮಂಕಾತ ಚಿತ್ರ ಬಾಕ್ಸ್ ಆಫೀಸ್ ಧೂಳ್ ಎಬ್ಬಿಸಿತು. ಈ ಸಿನಿಮಾ ಅಜಿತ್ ಸಿನಿಮಾ ಕೆರಿಯರ್‌ನ ಅತ್ಯುತ್ತಮ ಚಿತ್ರಗಳಲ್ಲೊಂದು ಎನಿಸಿಕೊಂಡಿದೆ. ಇನ್ನುಳಿದಂತೆ ಬಿರಿಯಾನಿ ಚಿತ್ರ ಸಾಧಾರಣಕ್ಕಿಂತ ಉತ್ತಮ ಎನಿಸಿಕೊಂಡರೆ, ಮಾಸು ಎಂಗಿರ ಮಸಿಲಮನಿ, ಚೆನ್ನೈ 600028 ಎರಡನೇ ಭಾಗ ಸಕ್ಸಸ್ ಕಂಡಿವೆ. 2021ರಲ್ಲಿ ಬಿಡುಗಡೆಗೊಂಡ ಮಾನಾಡು ಚಿತ್ರ ಬಿಗ್ಗೆಸ್ಟ್ ಹಿಟ್ ಆಯಿತು. ಈ ಚಿತ್ರ ಸಿಳಂಬರಸನ್‌ಗೆ ದೊಡ್ಡ ಕಮ್ ಬ್ಯಾಕ್ ಚಿತ್ರವಾಗಿದೆ. ಬಳಿಕ ಬಿಡುಗಡೆಗೊಂಡ ಮನ್ಮಥ ಲೀಲೈ ಸಹ ಗೆಲುವು ಕಂಡಿದೆ. ಹೀಗೆ ವೆಂಕಟ್ ಪ್ರಭು ನಿರ್ದೇಶಿಸಿರುವ ಯಾವೊಂದು ಚಿತ್ರವೂ ಸಹ ಬಾಕ್ಸ್ ಆಫೀಸ್‌ನಲ್ಲಿ ಸೋತಿಲ್ಲ.

ಬ್ಲಾಕ್‌ಬಸ್ಟರ್ ಪಕ್ಕಾವೆಂಕಟ್ ಪ್ರಭು ಇಲ್ಲಿಯವರೆಗೂ ತಾವು ನಿರ್ದೇಶಿಸಿರುವ ಸ್ಟಾರ್ ನಟರ ಚಿತ್ರಗಳಲ್ಲಿ ಒಮ್ಮೆಯೂ ಎಡವಿಲ್ಲ. ಸ್ಟಾರ್ ನಟರ ಚಿತ್ರಗಳಿಗೆ ಆಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕಾಗಲೆಲ್ಲಾ ವಾವ್ ಎನಿಸುವಂತಹ ಸಿನಿಮಾಗಳನ್ನೇ ಮಾಡಿರುವ ವೆಂಕಟ್ ಪ್ರಭು ಕಿಚ್ಚ ಸುದೀಪ್‌ಗೂ ಸಹ ಅಂತಹದ್ದೇ ಸಿನಿಮಾ ಕಟ್ಟಿಕೊಡಲಿದ್ದಾರೆ. ಇನ್ನು ಮಂಕಾತ ಹಾಗೂ ಮಾನಾಡು ರೇಂಜಿನ ಚಿತ್ರವನ್ನೇನಾದರೂ ವೆಂಕಟ್‌ ಪ್ರಭು ಕಿಚ್ಚ ಸುದೀಪ್‌ಗೆ ನಿರ್ದೇಶಿಸಿದರೆ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದು ಖಚಿತ.