ಡೆಂಕಣಿಕೋಟೆ ಸಮೀಪ ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ ಡಿಕ್ಕಿಯಾಗಿ ಮೂವರ ದುರ್ಮರಣ

ಡೆಂಕಣಿಕೋಟೆ ಸಮೀಪ ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ ಡಿಕ್ಕಿಯಾಗಿ ಮೂವರ ದುರ್ಮರಣ

ಬೆಂಗಳೂರು ಗ್ರಾಮಾಂತರ: ತಮಿಳುನಾಡಿನ ಡೆಂಕಣಿಕೋಟೆ ಸಮೀಪ ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ ಡಿಕ್ಕಿಯಾಗಿ ಮೂವರು ಸವಾರರು ಮೃತಪಟ್ಟಿರುವ ಘಟನೆ (Road Accident) ನಡೆದಿದೆ.

ತಮಿಳರಸಿ(19), ತಮಿಳುಪ್ರಿಯಾ(17) ಹಾಗೂ ಅಂಬೇಡ್ಕರ್ ವಲವನ್ (14) ಮೃತರು. ಇವರು ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ತೆರಳುತ್ತಿದ್ದಾಗ ಡೆಂಕಣಿಕೋಟೆ ಸಮೀಪದ ಸಿಂಗಾರತೋಪು ಬಳಿ ಅತಿವೇಗವಾಗಿ ಹಿಂಬದಿಯಿಂದ ಕ್ಯಾಂಟರ್‌ ಬಂದು ಡಿಕ್ಕಿ ಹೊಡೆದಿದೆ. ಈ ವೇಳೆ ಇಬ್ಬರು ಸಹೋದರಿಯರು ಹಾಗೂ ಇವರ ಸಂಬಂಧಿಕರ ಪುತ್ರ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರಿಂದ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಡೆಂಕಣಿಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಪೋಷಕರು ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು.

ಬೀದರ್: ಜಿಲ್ಲೆಯ ಹುಮನಾಬಾದ್‌ ತಾಲೂಕಿನ ಹುಡಗಿ ಗ್ರಾಮದ ಹೊರವಲಯದ ಹೈದರಾಬಾದ್- ಮುಂಬಯಿ ರಾಷ್ಟ್ರೀಯ ಹೆದ್ದಾರಿ-65ರ ಪಕ್ಕದಲ್ಲಿ 30 ವರ್ಷದ ಅಪರಿಚಿತ ಯುವಕನ ಶವ ಪತ್ತೆಯಾಗಿದೆ. ಬೇರೆ ಕಡೆ ಕೊಲೆಗೈದು ರಸ್ತೆ ಬದಿ ಶವ ಎಸೆದಿರುವ ಶಂಕೆ ವ್ಯಕ್ತವಾಗಿದೆ.

ಆರೋಪಿಗಳು ಯುವಕನನ್ನು ಕೊಂದು ಮೃತದೇಹವನ್ನು ಸುಟ್ಟು ಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ. ಹುಮನಾಬಾದ್‌ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ.