ಆರ್‌ಎಸ್‌ಎಸ್ ಅನ್ನು ತಾಲಿಬಾನ್‌ಗೆ ಹೋಲಿಸಿದನ್ನು ಮತ್ತೆ ಸಮರ್ಥಿಸಿಕೊಂಡ ಆರ್.ಧ್ರುವನಾರಾಯಣ್

ಮೈಸೂರು: ಆರ್‌ಎಸ್‌ಎಸ್ ಸಂಘಟನೆಯನ್ನು ತಾಲಿಬಾನ್‌ಗೆ ಹೋಲಿಕೆ ಮಾಡಿರುವ ಹೇಳಿಕೆಗೆ ಈಗಲೂ ಬದ್ಧ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಸ್ಪಷ್ಟಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮವನ್ನು ಇಟ್ಟುಕೊಂಡು ಆರ್‌ಎಸ್‌ಎಸ್ ಹಾಗೂ ತಾಲಿಬಾನ್ ಕೆಲಸ ಮಾಡುತ್ತವೆ. ಹೀಗಾಗಿ, ಈ ಎರಡೂ ಸಂಘಟನೆಗಳಿಗೆ ಹೋಲಿಕೆಗಳಿವೆ. ಅದರ ಆಧಾರದ ಮೇಲೆ ಆರ್‌ಎಸ್‌ಎಸ್‌ನ್ನು ತಾಲಿಬಾನ್‌ಗೆ ಹೋಲಿಕೆ ಮಾಡಿದ್ದೇನೆ ಎಂದು ತಿಳಿಸಿದರು.
ಆರ್‌ಎಸ್‌ಎಸ್ ಮತ್ತು ತಾಲಿಬಾನಿಗಳು ಧರ್ಮವನ್ನು ಪ್ರತಿಪಾದನೆ ಮಾಡುತ್ತಾರೆ. ಜಾತ್ಯತೀತ ನಿಲುವುಗಳಲ್ಲಿ ಬದ್ಧತೆ ಇಲ್ಲ. ಆರ್ಎಸ್ಎಸ್ನ ಕಾರ್ಯಕರ್ತ ನಾಥೂರಾಮ್ ಗೋಡ್ಸೆ, ಮಹಾತ್ಮ ಗಾಂಧೀಜಿಯನ್ನು ಗುಂಡಿಕ್ಕಿ ಕೊಲೆ ಮಾಡಿದ. ಆ ಸಮಯದಲ್ಲಿ ಸ್ವಾತಂತ್ರ್ಯ ಬಂದ ನಂತರ ಅಂದಿನ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಆರ್‌ಎಸ್‌ಎಸ್ ಸಂಘಟನೆಯನ್ನು ನಿಷೇಧಿಸಿದ್ದರು ಎಂದರು.
ಆರ್ಎಸ್ಎಸ್ಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಇದರ ಜೊತೆಗೆ ಧರ್ಮದ ಪ್ರತಿಪಾದನೆ ಮಾಡುವುದು, ಮನುವಾದದ ಶ್ರೇಣಿಕೃತ ಸಮಾಜವನ್ನು ಪೋಷಣೆ ಮಾಡುವುದು ಆರ್‌ಎಸ್‌ಎಸ್ ಅಜೆಂಡವಾಗಿದೆ. ತಾಲಿಬಾನಿಗಳು ಕೂಡ ಧರ್ಮ, ಮಹಿಳೆಯರನ್ನು ದೂರ ಇಟ್ಟಿದ್ದಾರೆ. ಅದರಂತೆ ಆರ್‌ಎಸ್‌ಎಸ್ ಕೂಡ ಮಹಿಳೆಯರನ್ನು ದೂರ ಇಟ್ಟಿದೆ ಎಂದು ಹೇಳಿದರು.