ಗುಜರಾತ್ ಜೈಂಟ್ಸ್ ಗೆದ್ದರೆ ಆರ್ಸಿಬಿ ತಂಡಕ್ಕೆ ಲಾಭ: ಯುಪಿ ವಾರಿಯರ್ಸ್ ಗೆದ್ದರೆ ನೇರವಾಗಿ ಪ್ಲೇಆಫ್ಗೆ
ಸೋಮವಾರ ಮಹಿಳಾ ಪ್ರೀಮಿಯರ್ ಲೀಗ್ನ ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ಮುಖಾಮುಖಿಯಾಗಲಿವೆ. ಗುಜರಾತ್ ಜೈಂಟ್ಸ್ ಈ ಪಂದ್ಯದಲ್ಲಿ ಸೋತರೆ ಟೂರ್ನಿಯಿಂದ ಹೊರಬೀಳಲಿದೆ.
ಕಳೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ಸಾಕಷ್ಟು ಆತ್ಮವಿಶ್ವಾಸ ಪಡೆದುಕೊಂಡಿದೆ.
ಗುಜರಾತ್ ಜೈಂಟ್ಸ್ ಆಡಿದ ಕೊನೆಯ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು ಬೌಲಿಂಗ್ ವಿಭಾಗದಲ್ಲಿ ವಿಫಲವಾಗಿತ್ತು. 189 ರನ್ಗಳ ಬೃಹತ್ ಗುರಿ ನೀಡಿದರೂ, ಆರ್ ಸಿಬಿ ಕೇವಲ 15.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತ್ತು. ಸೋಫಿ ಡಿವೈನ್ ಅತ್ಯದ್ಭುತ ಇನ್ನಿಂಗ್ಸ್ ಆಡಿದ್ದರು.
ಸೋಮವಾರ ಮಧ್ಯಾಹ್ನ 3.30ಕ್ಕೆ ಪಂದ್ಯ ಆರಂಭವಾಗಲಿದ್ದು, ಮುಂಬೈನ ಬ್ರಬೌರ್ನೆ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಎರಡೂ ತಂಡಗಳಲ್ಲಿ ಬಲಿಷ್ಠ ಬ್ಯಾಟಿಂಗ್ ಪಡೆ ಇರುವುದರಿಂದ ಹೈಸ್ಕೋರ್ ಪಂದ್ಯವಾಗುವ ಸಾಧ್ಯತೆ ಇದೆ.
ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ
ಎರಡೂ ತಂಡಗಳಲ್ಲಿ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಗುಜರಾತ್ ಜೈಂಟ್ಸ್ ತಂಡದಲ್ಲಿ ಲಾರಾ ವೊಲ್ವಾರ್ಡ್ಟ್ ಸತತವಾಗಿ ಎರಡು ಅರ್ಧಶತಕಗಳನ್ನು ಗಳಿಸಿದ್ದು, ಉತ್ತಮ ಫಾರ್ಮ್ನಲ್ಲಿ ಮಿಂಚುತ್ತಿದ್ದಾರೆ. ಆಶ್ಕೆ ಗಾರ್ಡ್ನರ್, ಸೋಫಿಯಾ ಡಂಕ್ಲಿ, ಹರ್ಲೀನ್ ಡಿಯೋಲ್ ಕೂಡ ಸ್ಫೋಟಕ ಇನ್ನಿಂಗ್ಸ್ ಆಡುವ ಸಾಮರ್ಥ್ಯ ಹೊಂದಿದ್ದಾರೆ.
ಯುಪಿ ವಾರಿಯರ್ಸ್ ತಂಡದಲ್ಲಿ ಅಲಿಸ್ಸಾ ಹೀಲಿ ತಂಡದ ಪ್ರಮುಖ ಬ್ಯಾಟರ್ ಆಗಿದ್ದಾರೆ. ತಹ್ಲಿಯಾ ಮೆಕ್ಗ್ರಾತ್, ಗ್ರೇಸ್ ಹ್ಯಾರಿಸ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸೋಫಿ ಎಕ್ಲೆಸ್ಟೋನ್, ರಾಜೇಶ್ವರಿ ಗಾಯಕ್ವಾಡ್ ಪ್ರಮುಖವಾಗಿದ್ದಾರೆ.
ಉಭಯ ತಂಡಗಳ ಸಂಭ್ಯಾವ್ಯ ಬಳಗ
ಗುಜರಾತ್ ಜೈಂಟ್ಸ್ : ಸೋಫಿಯಾ ಡಂಕ್ಲಿ, ಲಾರಾ ವೊಲ್ವಾರ್ಡ್ಟ್, ಸಬ್ಬಿನೇನಿ ಮೇಘನಾ, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಕಿಮ್ ಗಾರ್ತ್, ಸ್ನೇಹ ರಾಣಾ (ನಾಯಕಿ), ತನುಜಾ ಕನ್ವರ್, ಅಶ್ವನಿ ಕುಮಾರಿ.
ಯುಪಿ ವಾರಿಯರ್ಜ್: ದೇವಿಕಾ ವೈದ್ಯ, ಅಲಿಸ್ಸಾ ಹೀಲಿ (ನಾಯಕಿ), ಕಿರಣ್ ನವಗಿರೆ, ತಹ್ಲಿಯಾ ಮೆಕ್ಗ್ರಾತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಪಾರ್ಶವಿ ಚೋಪ್ರಾ, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.