ಖಾಲಿಸ್ತಾನಿ ನಾಯಕ ಅಮೃತ್ ಪಾಲ್ ಸಿಂಗ್ ನನ್ನು ಇನ್ನೂ ಬಂಧಿಸಲಾಗಿಲ್ಲ: ಅಧಿಕಾರಿಗಳು

ಖಾಲಿಸ್ತಾನಿ ನಾಯಕ ಅಮೃತ್ ಪಾಲ್ ಸಿಂಗ್ ನನ್ನು ಇನ್ನೂ ಬಂಧಿಸಲಾಗಿಲ್ಲ: ಅಧಿಕಾರಿಗಳು

ಹೊಸದಿಲ್ಲಿ/ಅಮೃತಸರ: ಖಾಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಪಂಜಾಬ್ ಪೊಲೀಸರಿಂದ ತಪ್ಪಿಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೃತ್ ಪಾಲ್ ಜಲಂಧರ್‌ನಲ್ಲಿ ನಿನ್ನೆ ಸಂಜೆ ಬೈಕ್ ನಲ್ಲಿ ವೇಗವಾಗಿ ಹೋಗುತ್ತಿರುವುದು ಕಂಡುಬಂದಿದ್ದು, ಅಮೃತಪಾಲ್ ಸಿಂಗ್ ನನ್ನು ಹಿಡಿಯಲು ಬೃಹತ್ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿಂಗ್ ನನ್ನು ಬಂಧಿಸಲು ರಾಜ್ಯ ಪೊಲೀಸರು ಭಾರೀ ಶೋಧ ನಡೆಸಿದ್ದು, ಅತ ಪರಾರಿಯಾಗಿದ್ದಾನೆ. ಅಮೃತಪಾಲ್ ಪೂರ್ವಜರ ಗ್ರಾಮವಾದ ಜಲ್ಲು ಖೇಡಾದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಪ್ರತಿಭಟನೆ ಮತ್ತು ಹಿಂಸಾಚಾರವನ್ನು ತಪ್ಪಿಸಲು ವಿವಿಧ ಜಿಲ್ಲೆಗಳಲ್ಲಿ ಸೆಕ್ಷನ್ 144 ವಿಧಿಸಲಾಗಿದೆ. ಪಂಜಾಬ್ ಮತ್ತು ಪಂಜಾಬ್ ಜೊತೆ ಗಡಿ ಹಂಚಿಕೊಂಡಿರುವ ನೆರೆಯ ಹಿಮಾಚಲದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

"ಅಮೃತಪಾಲ್ ಸಿಂಗ್ ಸ್ಥಳದಿಂದ ಪರಾರಿಯಾಗಿದ್ದ ಆದರೆ ಅವರ 7 ಆಪ್ತರನ್ನು ಬಂಧಿಸಲಾಯಿತು. ಅವರಿಂದ ಆರು 12-ಬೋರ್ ಶಸ್ತ್ರಾಸ್ತ್ರಗಳು ಮತ್ತು ಕಾರ್ಟ್ರಿಡ್ಜ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅವೆಲ್ಲವೂ ಅಕ್ರಮವಾಗಿದೆ. ಅಮೃತಪಾಲ್ ಮನ್ನು ಶೀಘ್ರದಲ್ಲೇ ಬಂಧಿಸಲಾಗುವುದು'' ಎಂದು ಅಮೃತಸರ ಗ್ರಾಮಾಂತರ ಎಸ್‌ಎಸ್‌ಪಿ ಸತೀಂದರ್ ಸಿಂಗ್ ಹೇಳಿದ್ದಾರೆ.

ಅಮೃತಪಾಲ್ ಸಿಂಗ್ ಸಂಘಟನೆ 'ವಾರಿಸ್ ಪಂಜಾಬ್ ದೇ' ನ 78 ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ, ಇನ್ನೂ ಹಲವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಬಂಧಿಸಿದವರಲ್ಲಿ ಅಮೃತಪಾಲ್ ಸಿಂಗ್ ನ ಆರರಿಂದ ಏಳು ಮಂದಿ ಬಂದೂಕುಧಾರಿಗಳು ಸೇರಿದ್ದಾರೆ ಎಂದು ಜಲಂಧರ್ ಪೊಲೀಸ್ ಕಮಿಷನರ್ ಕುಲದೀಪ್ ಸಿಂಗ್ ಚಾಹಲ್ ತಿಳಿಸಿದ್ದಾರೆ.

ಖಾಲಿಸ್ತಾನಿ ನಾಯಕನ ಹಣಕಾಸು ನಿರ್ವಹಣೆ ಮಾಡುತ್ತಿರುವ ಅಮೃತಪಾಲ್ ಸಿಂಗ್ ನ ಆಪ್ತ ಸಹಾಯಕ ದಲ್ಜೀತ್ ಸಿಂಗ್ ಕಲ್ಸಿ, ಅವರನ್ನು ಹರ್ಯಾಣದ ಗುರ್ಗಾಂವ್‌ನಿಂದ ಬಂಧಿಸಲಾಗಿದೆ.

ಏಳು ಜಿಲ್ಲೆಗಳ ಸಿಬ್ಬಂದಿಯನ್ನು ಒಳಗೊಂಡ ರಾಜ್ಯ ಪೊಲೀಸರ ವಿಶೇಷ ತಂಡವು ನಿನ್ನೆ ಜಲಂಧರ್‌ನ ಶಾಕೋಟ್ ತಹಸಿಲ್‌ಗೆ ತೆರಳುತ್ತಿದ್ದಾಗ ಖಾಲಿಸ್ತಾನಿ ನಾಯಕನ ಬೆಂಗಾವಲು ಪಡೆಯನ್ನು ಹಿಂಬಾಲಿಸಿದೆ.

ಪೊಲೀಸರು ತಮ್ಮನ್ನು ಬೆನ್ನಟ್ಟುತ್ತಿದ್ದಾರೆ. ಶಾಕೋಟ್‌ನಲ್ಲಿ ಬೆಂಬಲಿಗರು ಒಟ್ಟಾಗಿ ಎಂಬ ಸಂದೇಶವಿರುವ ಕೆಲವು ವೀಡಿಯೊಗಳನ್ನು ಅಮೃತಪಾಲ್ ಆಪ್ತರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ಅಧಿಕಾರಿಗಳು ಹಲವಾರು ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದರು ಹಾಗೂ ರಾಜ್ಯದಲ್ಲಿ ಇಂಟರ್ನೆಟ್ ಮತ್ತು SMS ಸೇವೆಗಳನ್ನು ಸ್ಥಗಿತಗೊಳಿಸಿದರು.

ಸಾಮಾಜಿಕ ಮಾಧ್ಯಮಗಳ ಮೂಲಕ ತಪ್ಪು ಮಾಹಿತಿ ಮತ್ತು ವದಂತಿಗಳನ್ನು ಹರಡುವುದನ್ನು ತಡೆಯಲು ರಾಜ್ಯದಲ್ಲಿ ಸೋಮವಾರ ಮಧ್ಯಾಹ್ನದವರೆಗೆ ಇಂಟರ್ನೆಟ್ ಸ್ಥಗಿತ ಮುಂದುವರಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.