ಕೆಪಿಟಿಸಿಎಲ್ 505 ಹುದ್ದೆ: 501 ಅಭ್ಯರ್ಥಿಗಳಷ್ಟೆ ಅರ್ಹರು!

ಕೆಪಿಟಿಸಿಎಲ್ 505 ಹುದ್ದೆ: 501 ಅಭ್ಯರ್ಥಿಗಳಷ್ಟೆ ಅರ್ಹರು!

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್), ಬೆಸ್ಕಾಂ, ಸೆಸ್ಕ್‌, ಹೆಸ್ಕಾಂ, ಮೆಸ್ಕಾಂ ಮತ್ತು ಜೆಸ್ಕಾಂಗಳ ಆಡಳಿತ ವ್ಯಾಪ್ತಿಯ ಕಚೇರಿಗಳಲ್ಲಿ ಖಾಲಿ ಇರುವ 1,492 ವಿವಿಧ ಹುದ್ದೆಗಳ ನೇಮಕಾತಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹತೆಗೆ ನಿಗದಿಪಡಿಸಿದ ಅಂಕಗಳಿಸಿದ ಅಭ್ಯರ್ಥಿಗಳ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಂಗಳವಾರ ಪ್ರಕಟಿಸಿದೆ.

ಆದರೆ, ಸಹಾಯಕ ಎಂಜಿನಿಯರ್‌ (ವಿದ್ಯುತ್‌) 505 ಹುದ್ದೆಗಳಿಗೆ (ಉಳಿಕೆ ವೃಂದದ 393, ಬ್ಯಾಕ್‌ಲಾಗ್‌ 6 , ಕಲ್ಯಾಣ ಕರ್ನಾಟಕ 106) ಅರ್ಜಿ ಸಲ್ಲಿಸಿದವರ ಪೈಕಿ, ಕನಿಷ್ಠ 35 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದು ಅರ್ಹರಾದ ಅಭ್ಯರ್ಥಿಗಳ ಸಂಖ್ಯೆ ಕೇವಲ 501!

ಸಲ್ಲಿಕೆಯಾದ ಒಟ್ಟು ಅರ್ಜಿಗಳಲ್ಲಿ 23,979 ಅಭ್ಯರ್ಥಿಗಳ ಅರ್ಜಿಗಳು ಪರೀಕ್ಷೆ ಬರೆಯಲು ಅರ್ಹವಾಗಿದ್ದವು. ಆ ಮೂಲಕ, ಈ ಹುದ್ದೆಗಳಿಗೆ ಅಗತ್ಯವಾದಷ್ಟು ಸಂಖ್ಯೆಯ ಅಭ್ಯರ್ಥಿಗಳು ಅರ್ಹತೆಗೆ ನಿಗದಿಪಡಿಸಿದ್ದ ಗರಿಷ್ಠ ಅಂಕ ಗಳಿಸಲು ವಿಫಲರಾಗಿದ್ದಾರೆ. ಅಷ್ಟೇ ಅಲ್ಲ, ಕಿರಿಯ ಸಹಾಯಕ ಹುದ್ದೆ ಹೊರತುಪಡಿಸಿದರೆ, ಇತರ ಹುದ್ದೆಗಳಿಗೆ ಅರ್ಹತೆ ಪಡೆದವರ ಸಂಖ್ಯೆಯೂ ಕಡಿಮೆಯಿದೆ.

ಕಿರಿಯ ಎಂಜಿನಿಯರ್‌ (ವಿದ್ಯುತ್‌) ಒಟ್ಟು 570 (ಉಳಿಕೆ ವೃಂದ 477 , ಬ್ಯಾಕ್‌ಲಾಗ್‌ 11 , ಕಲ್ಯಾಣ ಕರ್ನಾಟಕ 82) ಹುದ್ದೆಗಳಿಗೆ ಪರೀಕ್ಷೆಗೆ 22,920 ಅರ್ಜಿಗಳು ಅರ್ಹವಾಗಿದ್ದವು. ಈ ಪೈಕಿ, 1,049 ಅಭ್ಯರ್ಥಿಗಳು ಮಾತ್ರ 35 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿ ಅರ್ಹರಾಗಿದ್ದಾರೆ. ವಿಶೇಷವೆಂದರೆ, ಈ ಹುದ್ದೆಗಳಿಗೂ 1:2 ಅನುಪಾತದಲ್ಲಿ ಅಭ್ಯರ್ಥಿಗಳು ಅರ್ಹರಾಗಿಲ್ಲ.

ಸಹಾಯಕ ಎಂಜಿನಿಯರ್ (ಸಿವಿಲ್) ಒಟ್ಟು 28 (ಉಳಿಕೆ ವೃಂದ 21, ಕಲ್ಯಾಣ ಕರ್ನಾಟಕ 7) ಹುದ್ದೆಗಳಿಗೆ 24,316 ಅರ್ಜಿಗಳ ಪೈಕಿ, ಪರೀಕ್ಷೆ ಬರೆದವರಲ್ಲಿ 35ಕ್ಕೂ ಹೆಚ್ಚು ಅಂಕ ಪಡೆದವರು 700 ಮಂದಿ ಇದ್ದಾರೆ. ಕಿರಿಯ ಎಂಜಿನಿಯರ್ (ಸಿವಿಲ್) ಒಟ್ಟು 29 (ಉಳಿಕೆ ವೃಂದ 21, ಕಲ್ಯಾಣ ಕರ್ನಾಟಕ 8) ಹುದ್ದೆಗಳಿಗೆ 15,140 ಮಂದಿಯಲ್ಲಿ ಪರೀಕ್ಷೆ ಬರೆದವರಲ್ಲಿ 3,010 ಅಭ್ಯರ್ಥಿಗಳು ಮಾತ್ರ 35ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ.

ಅತೀ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವ ಕಿರಿಯ ಸಹಾಯಕ 358 ಹುದ್ದೆಗಳಿಗೆ ಪರೀಕ್ಷೆ ಬರೆಯಲು 3,10,960 ಅಭ್ಯರ್ಥಿಗಳು‌ ಅರ್ಹವಾಗಿದ್ದರು. ಅವುಗಳಲ್ಲಿ 35ಕ್ಕೂ ಹೆಚ್ಚು ಅಂಕವನ್ನು 61,174 ಅಭ್ಯರ್ಥಿಗಳು ಗಳಿಸಿದ್ದಾರೆ. ಈ ಹುದ್ದೆಗಳಿಗೆ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹರಿದ್ದಾರೆ.

'ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮ 2021ರ ಪ್ರಕಾರ, ಅಭ್ಯರ್ಥಿ ಅರ್ಹತೆ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಯ ಒಟ್ಟು ಅಂಕಗಳಲ್ಲಿ ಕನಿಷ್ಠ ಶೇ 35ರಷ್ಟು ಅಂಕ ಗಳಿಸುವುದು ಕಡ್ಡಾಯವಾಗಿದೆ. ಈ ಹುದ್ದೆಗಳಿಗೆ ಐಚ್ಚಿಕ ವಿಷಯದಲ್ಲಿ 100 ಅಂಕಗಳಿಗೆ ಪರೀಕ್ಷೆ ನಡೆದಿದೆ' ಎಂದು ಕೆಇಎ ಮೂಲಗಳು ತಿಳಿಸಿವೆ.

ಪರೀಕ್ಷಾ ಅಕ್ರಮ: 41 ಬಂಧನ
ಕಿರಿಯ ಸಹಾಯಕರ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಈಗಾಗಲೇ ಬಹಿರಂಗವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈವರೆಗೆ 41 ಮಂದಿಯನ್ನು ಬಂಧಿಸಿದ್ದಾರೆ. ಮೈಕ್ರೊಚಿಪ್, ಮೊಬೈಲ್‌ ಹಾಗೂ ಇತರ ಎಲೆಕ್ಟ್ರಾನಿಕ್‌ ಸಾಧನಗಳನ್ನು ಬಳಸಿ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಗೊತ್ತಾಗಿದೆ.

*
ಈ ಬಾರಿಯ ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿಗಳಿಗೆ ಕಷ್ಟಕರವಾಗಿತ್ತು. ತಪ್ಪು ಉತ್ತರಗಳಿಗೆ ಅಂಕಗಳ ಕಡಿತವೂ ಇತ್ತು. ಹೀಗಾಗಿ, ಅರ್ಹರ ಸಂಖ್ಯೆ ‌ಕಡಿಮೆಯಾಗಿದೆ.
-ಎಸ್‌.ರಮ್ಯಾ, ಕಾರ್ಯನಿರ್ವಾಹಕ ನಿರ್ದೇಶಕಿ, ಕೆಇಎ