ಕೃಷಿ ಮೇಳ: ಸಬ್ಸಿಡಿ ಘೋಷಿಸದ ಸರ್ಕಾರ: ಯಂತ್ರೋಪಕರಣ ಖರೀದಿಗೆ ಹಿಂದೇಟು

ಕೃಷಿ ಮೇಳ: ಸಬ್ಸಿಡಿ ಘೋಷಿಸದ ಸರ್ಕಾರ: ಯಂತ್ರೋಪಕರಣ ಖರೀದಿಗೆ ಹಿಂದೇಟು

ಬೆಂಗಳೂರು: ಕೃಷಿ ಯಂತ್ರೋಪಕರಣ ಖರೀದಿ ಮೇಲೆ ಸಬ್ಸಿಡಿ ಘೋಷಿಸಲು ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದ್ದು, ಇದರಿಂದಾಗಿ 'ಕೃಷಿ ಮೇಳ'ದಲ್ಲಿ ದುಬಾರಿಗೆ ಬೆಲೆಗೆ ಯಂತ್ರೋಪಕರಣ ಖರೀದಿಸಲು ರೈತರು ಹಿಂದೇಟು ಹಾಕುತ್ತಿದ್ದಾರೆ.

ಸಬ್ಸಿಡಿ ಘೋಷಿಸದ ಸರ್ಕಾರದ ವರ್ತನೆಗೂ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಕೃಷಿ ಮೇಳದಲ್ಲಿ ಯಂತ್ರೋಪಕರಣ ಪ್ರದರ್ಶನಕ್ಕೆಂದು ಪ್ರತ್ಯೇಕ ಮಳಿಗೆಗಳನ್ನು ತೆರೆಯಲಾಗಿದೆ. ಜಮೀನು ಹದಗೊಳಿಸುವ, ಕಳೆ ಹಾಗೂ ಮೇವು ಕತ್ತರಿಸುವ, ಬೆಳೆ ಕಟಾವು, ಔಷಧ ಸಿಂಪಡಣೆ, ಹಾಲು ಕರೆಯುವ, ಕೃಷಿ ಹೊಂಡ, ಮೀನು ಸಾಕಾಣಿಕೆ ಸೇರಿದಂತೆ ಹಲವು ಕೆಲಸಗಳಿಗಾಗಿ ಯಂತ್ರೋಪಕರಣ ಮೇಳದಲ್ಲಿ ಲಭ್ಯವಿವೆ. ಬೆಂಗಳೂರು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಕಂಪನಿಗಳು ಯಂತ್ರೋಪಕರಣ ಪ್ರದರ್ಶನಕ್ಕೆ ಇರಿಸಿವೆ.ಆದರೆ, ಖರೀದಿ ಮೇಲೆ ಸರ್ಕಾರದ ಸಬ್ಸಿಡಿ ಇಲ್ಲದಿದ್ದರಿಂದ ಯಂತ್ರಗಳ ಮಾರಾಟ ಪ್ರಮಾಣ ಕುಸಿದಿದೆ. ಯಂತ್ರೋಪಕರಣ ನೋಡುವುದಕ್ಕಷ್ಟೇ ಮೇಳ ಸೀಮಿತವಾದಂತಾಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

'ಐದು ಎಕರೆ ಬೇಸಾಯ ಮಾಡುತ್ತಿದ್ದೇನೆ. ನನಗೆ ಕಲ್ಟಿವೇಟರ್ ಬೇಕಾಗಿತ್ತು. ಅದನ್ನು ತೆಗೆದುಕೊಳ್ಳಲು ಮೇಳಕ್ಕೆ ಬಂದಿದ್ದೇನೆ. ಆದರೆ, ಬೆಲೆ ದುಬಾರಿ. ಸರ್ಕಾರದ ಸಬ್ಸಿಡಿ ಸಹ ಇಲ್ಲ. ಹೀಗಾಗಿ, ಯಂತ್ರ ಖರೀದಿಸುತ್ತಿಲ್ಲ' ಎಂದು ರಾಮನಗರದ ರೈತ ಮುನಿಸ್ವಾಮಿ 'ಪ್ರಜಾವಾಣಿ'ಗೆ ತಿಳಿಸಿದರು.

'ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣ ಬಳಸಿ, ಲಾಭ ಹೆಚ್ಚಿಸಿಕೊಳ್ಳಿ' ಎಂದು ಸರ್ಕಾರದ ಹೇಳುತ್ತದೆ. ಆದರೆ, ಯಾವುದೇ ಸಬ್ಸಿಡಿ ನೀಡುತ್ತಿಲ್ಲ. ಸರ್ಕಾರದ ಈ ನಡೆ ರೈತ ವಿರೋಧಿಯಾಗಿದೆ. ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರು ಸಬ್ಸಿಡಿ ಬಗ್ಗೆ ತುರ್ತಾಗಿ ಗಮನಹರಿಸಬೇಕು' ಎಂದೂ ಅವರು ಆಗ್ರಹಿಸಿದರು.

ಚಿಕ್ಕಬಳ್ಳಾಪುರದ ರೈತ ಬಿ. ರಂಗಪ್ಪ, 'ಕೃಷಿಯಲ್ಲಿ ಕಾರ್ಮಿಕರ ಕೊರತೆ ಸಾಕಷ್ಟಿದೆ. ಹೀಗಾಗಿ, ಯಂತ್ರ ಖರೀದಿಸಲು ಮೇಳಕ್ಕೆ ಬಂದಿದ್ದೆ. ಸಬ್ಸಿಡಿ ಇಲ್ಲವೆಂದು ಮಳಿಗೆಯವರು ಹೇಳುತ್ತಿದ್ದಾರೆ. ದುಬಾರಿ ಹಣವಾಗಿದ್ದರಿಂದ ಯಂತ್ರ ಖರೀದಿಸಿಲ್ಲ' ಎಂದರು.

ಲಾಕ್‌ಡೌನ್‌ ವೇಳೆ ಸಬ್ಸಿಡಿ ರದ್ದು: 'ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಕೃಷಿ ಯಂತ್ರೋಪಕರಣ ಖರೀದಿ ಮೇಲಿನ ಸಬ್ಸಿಡಿಯನ್ನು ಸರ್ಕಾರ ರದ್ದುಪಡಿಸಿದೆ. ಲಾಕ್‌ಡೌನ್ ಮುಗಿದ ನಂತರ ಯಾವುದೇ ಸಬ್ಸಿಡಿಯನ್ನೂ ಸರ್ಕಾರ ಘೋಷಿಸಿಲ್ಲ' ಎಂದು ಯಂತ್ರೋಪಕರಣ ತಯಾರಿಕೆ ಕಂಪನಿಯೊಂದರ ವ್ಯವಸ್ಥಾಪಕ ರಮೇಶ್ ಹೇಳಿದರು.

ಮೂಡಿಗೆರೆ ಬಸವೇಶ್ವರ ಎಂಜಿನಿ ಯರ್ಸ್‌ನ ಸ್ಥಾಪಕ ವಿ. ಶ್ರೀನಿವಾಸ್, 'ತೆಂಗಿನಕಾಯಿ ಹಾಗೂ ಅಡಿಕೆ ಸುಲಿಯುವ ಯಂತ್ರ ಪ್ರದರ್ಶನಕ್ಕೆ ಇರಿಸಿದ್ದೇವೆ. ಯಂತ್ರಗಳನ್ನು ಖರೀದಿಸುವ ರೈತರಿಗೆ ಶೇ 20ರಿಂದ ಶೇ 25ರಷ್ಟು ಸಬ್ಸಿಡಿ ಇರುತ್ತಿತ್ತು. ಆದರೆ, ಈಗ ಸಬ್ಸಿಡಿ ಇಲ್ಲ. ಹೀಗಾಗಿ, ಯಂತ್ರಗಳ ಖರೀದಿಗೆ ರೈತರು ಹಿಂದೇಟು ಹಾಕುತ್ತಿದ್ದಾರೆ' ಎಂದರು.

'ತಯಾರಿಕೆ ಕಂಪನಿಗಳಿಂದ ಅರ್ಜಿ ಆಹ್ವಾನ''ಯಾವ ಯಂತ್ರೋಪಕರಣಗಳಿಗೆ ಎಷ್ಟು ಸಬ್ಸಿಡಿ ನೀಡಬೇಕು ಎಂಬುದರ ಪಟ್ಟಿ ಸಿದ್ಧಪಡಿಸುವ ಕೆಲಸ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ. ಯಂತ್ರೋಪಕರಣ ತಯಾರಿಕಾ ಕಂಪನಿಗಳಿಂದಲೂ ನೋಂದಣಿಗಾಗಿ ಅರ್ಜಿ ಆಹ್ವಾನಿಸಿ ಪ್ರಕ್ರಿಯೆ ಆರಂಭಿಸಲಾಗಿದೆ' ಎಂದು ಹೆಸರು ಹೇಳಲು ಇಚ್ಛಿಸದ ಕೃಷಿ ಇಲಾಖೆ
ಅಧಿಕಾರಿಯೊಬ್ಬರು ಹೇಳಿದರು.