ಕಾರು-ಲಾರಿ ಮಧ್ಯೆ ಭೀಕರ ಅಪಘಾತ; ಅಗ್ನಿವೀರ್‌ನನ್ನು ಸೈನ್ಯಕ್ಕೆ ಕಳಿಸಲು ಹೊರಟವರು ಸೇರಿದ್ದು ಮಸಣಕ್ಕೆ!

ಕಾರು-ಲಾರಿ ಮಧ್ಯೆ ಭೀಕರ ಅಪಘಾತ; ಅಗ್ನಿವೀರ್‌ನನ್ನು ಸೈನ್ಯಕ್ಕೆ ಕಳಿಸಲು ಹೊರಟವರು ಸೇರಿದ್ದು ಮಸಣಕ್ಕೆ!

ಧಾರವಾಡ: ಕಾರು- ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ಕಾರ್‌ನಲ್ಲಿದ್ದ ನಾಲ್ವರು ಹಾಗೂ ಪಾದಚಾರಿ ಸೇರಿ ಐವರು ಸ್ಥಳದಲ್ಲೇ ಮೃತಪಟ್ಟು ನಾಲ್ವರು ಗಾಯಗೊಂಡ ಧಾರುಣ ಘಟನೆ ತಾಲೂಕಿನ ತೇಗೂರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದ ನಾಗಪ್ಪ ಈರಪ್ಪ ಮುದ್ದೋಜಿ (29), ಮಹಾಂತೇಶ ಬಸಪ್ಪ ಮುದ್ದೊಜಿ (40), ನಿಚ್ಚಣಕಿ ಗ್ರಾಮದ ಬಸವರಾಜ ಶಿವಪುತ್ರಪ್ಪ ನರಗುಂದ (35), ಶ್ರೀಕುಮಾರ ನರಗುಂದ (5) ಹಾಗೂ ಧಾರವಾಡ ತಾಲೂಕು ಹೆಬ್ಬಳ್ಳಿ ಗ್ರಾಮದ ಈರಣ್ಣ ಗುರುಸಿದ್ದಪ್ಪ ರಾಮನಗೌಡರ (35) ಮೃತರು ಎಂದು ತಿಳಿದುಬಂದಿದೆ.

ಕಾರ್‌ನಲ್ಲಿದ್ದ ಶ್ರವಣಕುಮಾರ ಬಸವರಾಜ ನರಗುಂದ (07) ಮತ್ತು ಮಡಿವಾಳಪ್ಪ ರಾಜು ಅಳ್ನಾವರ (22) ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹಾಗೂ ಪ್ರಕಾಶಗೌಡ ಶಂಕರಗೌಡ ಪಾಟೀಲ (22), ಮಂಜುನಾಥ ಮಹಾಂತೇಶ ಮುದ್ದೋಜಿ (22) ಎಂಬುವರನ್ನು ಧಾರವಾಡ ಜಿಲ್ಲಾ ಅಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳು ಮಂಜುನಾಥ ಮುದ್ದೋಜಿ ಇತ್ತೀಚೆಗೆ ಅಗ್ನಿಪಥದಲ್ಲಿ ಭಾರತೀಯ ಸೇನೆಗೆ ನೇಮಕಗೊಂಡಿದ್ದ. ಸೈನ್ಯ ಸೇರಲು ಹೊರಟಿದ್ದ ಆತನನ್ನು ಹುಬ್ಬಳ್ಳಿವರೆಗೆ ಬಿಟ್ಟು ಬರಲು ಸ್ನೇಹಿತರು ಹಾಗೂ ಸಂಬಂಧಿಕರು ಕಾರ್‌ನಲ್ಲಿ ಹೊರಟಿದ್ದರು

ತೇಗೂರು ಬಳಿ ರಸ್ತೆ ದಾಟುತ್ತಿದ್ದ ಈರಣ್ಣ ರಾಮನಗೌಡರ ಎಂಬಾತ ಏಕಾಏಕಿ ಅಡ್ಡಬಂದಿದ್ದರಿಂದ ಆತನನ್ನು ರಕ್ಷಿಸಲು ಹೋಗಿ ಕಾರು ರಸ್ತೆ ಪಕ್ಕ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಗುದ್ದಿದೆ. ಈ ವೇಳೆ ಪಾದಚಾರಿಗೂ ಕಾರು ತಾಗಿ ಆತನೂ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿದ್ದರು.