ದೇಶದಲ್ಲಿ ಅಪರಾಧ ದರಕ್ಕೆ ಕಡಿವಾಣ ಹಾಕಲು `IPC-CRPC' ಕಾಯ್ದೆಗಳಲ್ಲಿ ಬದಲಾವಣೆ : ಕೇಂದ್ರ ಗೃಹ ಸಚಿವ ಅಮಿತ್ ಶಾ

ದೇಶದಲ್ಲಿ ಅಪರಾಧ ದರಕ್ಕೆ ಕಡಿವಾಣ ಹಾಕಲು `IPC-CRPC' ಕಾಯ್ದೆಗಳಲ್ಲಿ ಬದಲಾವಣೆ : ಕೇಂದ್ರ ಗೃಹ ಸಚಿವ ಅಮಿತ್ ಶಾ

ಧಾರವಾಡ : ದೇಶದಲ್ಲಿ ಅಪರಾಧ ದರವನ್ನು ಕಡಿವಾಣ ಹಾಕಲು ಭಾರತೀಯ ದಂಡ ಸಂಹಿತೆ (IPC), ಕ್ರಿಮಿನಲ್ ಪ್ರೊಸೀಜರ್ ಕೋಡ್ (CRPC) ಮತ್ತು ಸಾಕ್ಷ್ಯ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರು ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯದ ಆವರಣಲ್ಲಿ ರಾಷ್ಟ್ರೀಯ ನ್ಯಾಯ ವಿಜ್ಞಾನ ವಿಶ್ವವಿದ್ಯಾಲಯದ 9ನೇ ಕ್ಯಾಂಪಸ್‍ಗೆ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ನೇರವೇರಿಸಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅಪರಾಧ ಜಗತ್ತು ಬೆಳೆಯುತ್ತಿದೆ. ಅಪರಾಧಿಗಳು ಹೊಸ ಹೊಸ ಮಾರ್ಗಗಳನ್ನು ತಂತ್ರಜ್ಞಾನಗಳನ್ನು ಬಳಸುತ್ತಿದ್ದಾರೆ. ಅಪರಾಧವನ್ನು ನಿಯಂತ್ರಿಸಲು ಹಾಗೂ ಅಪರಾಧಿಗಳನ್ನು ಖಚಿತವಾಗಿ ಪತ್ತೆ ಹಚ್ಚುವಲ್ಲಿ ವಿಧಿ ವಿಜ್ಞಾನದ ಸಾಕ್ಷಾಧಾರಗಳು ಉಪಯೋಗವಾಗುತ್ತಿವೆ ಎಂದರು.

ಅಪರಾಧಗಳನ್ನು ನಿಯಂತ್ರಿಸಲು ಹಾಗೂ ಪತ್ತೆ ಹಚ್ಚಲು ದೇಶದ ನೀತಿಗಳಲ್ಲಿಯೂ ಬದಲಾವಣೆ ತರುವ ಅವಶ್ಯಕತೆಯಿದೆ. ತನಿಖೆಯು ವಿಧಿ ವಿಜ್ಞಾನದ ಆಧಾರದಲ್ಲಿ ನಡೆಯಬೇಕಿದೆ. ಅಪರಾಧ ನಡೆದ ಸ್ಥಳಗಳಲ್ಲಿ ತಕ್ಷಣವೇ ವಿಧಿ ವಿಜ್ಞಾನ ಅಧಿಕಾರಿಗಳನ್ನು ಭೇಟಿ ನೀಡುವಲ್ಲಿ ಕರ್ನಾಟಕ ಹಾಗೂ ದೆಹಲಿ ಮುಂಚೂಣಿ ಸ್ಥಾನದಲ್ಲಿವೆ. ಆರು ವರ್ಷಗಳ ಹೆಚ್ಚಿನ ಶಿಕ್ಷೆ ಆಗುವ ಅಪರಾಧಗಳಲ್ಲಿ ವಿಧಿ ವಿಜ್ಞಾನ ತನಿಖೆ ಕಡ್ಡಾಯವಾಗಿದೆ. ಕಾನೂನು ವ್ಯವಸ್ಥೆಯಲ್ಲಿ ತನಿಖೆಯಲ್ಲಿ ಅಪರಾಧಿಗಳಿಗೆ ಶಿಕ್ಷೆ ನೀಡುವಲ್ಲಿ ನ್ಯಾಯದಾನ ಕ್ಷೇತ್ರದಲ್ಲಿ ವಿಧಿ ವಿಜ್ಞಾನಗಳ ಸಾಕ್ಷಾಧಾರಗಳನ್ನು ಕಡ್ಡಾಯವಾಗಿ ಪರಿಗಣಿಸುವ ನಿಟ್ಟಿನಲ್ಲಿ ದೇಶದ ಐಪಿಸಿ-ಸಿಆರ್‍ಪಿಸಿಗಳಲ್ಲಿ ಬದಲಾವಣೆ ತರಲಾಗುವುದೆಂದರು.

ಅನ್ವಯಿಕ ವರ್ತನೆಗಳ ವಿಜ್ಞಾನಗಳ ಅಧ್ಯಯನಗಳೊಂದಿಗೆ ವಿಧಿ ವಿಜ್ಞಾನ ಕೇತ್ರದಲ್ಲಿ ಶೈಕ್ಷಣಿಕ ಕಲಿಕೆಗೆ ಎಲ್ಲ ರೀತಿಯ ಆಧುನಿಕ ಮೂಲ ಸೌಕರ್ಯ ಕಲ್ಪಿಸಿ ಉತ್ತೇಜಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಲಿವೆ. ವಿಧಿ ವಿಜ್ಞಾನ ಪರಿಣಿತರನ್ನು ಇಲ್ಲಿಂದ ಹೊರತರಲಾಗುವುದು. ಸೈಬರ್ ಸೆಕ್ಯೂರಿಟಿ, ಡಿಜಿಟಲ್ ಅಪರಾಧಿ, ಡಿಎನ್‍ಎ ವಿಧಿ ವಿಜ್ಞಾನ, ಆಹಾರ ಹಾಗೂ ಕೃಷಿ ವಿಧಿ ವಿಜ್ಞಾನ ಕೃತಕ ಬುದ್ಧಿಮತ್ತೆ ವಿಷಯಗಳ ಬಗ್ಗೆ ಶೈಕ್ಷಣಿಕ ವಿಷಯಗಳಲ್ಲಿ ಉನ್ನತ ಜ್ಞಾನ ನೀಡಲಾಗುವುದು. ಇಡೀ ಜಗತ್ತಿನಲ್ಲಿಯೇ ಹೆಚ್ಚಿನ ವಿಧಿ ವಿಜ್ಞಾನ ಪರಿಣಿತರನ್ನು ಭಾರತದಲ್ಲಿ ಹೊರತರಲಾಗುವುದೆಂದರು.

ಈ ವಿಶ್ವವಿದ್ಯಾಲಯದ ಯುವಕರಿಗೆ ಉದ್ಯೋಗ ನೀಡಲಿದೆ. ಹಾಗೂ ಅಪರಾಧಗಳನ್ನು ಕಡಿಮೆಗೊಳಿಸಲು ಉತ್ತಮ ಕಾರ್ಯ ನಿರ್ವಹಿಸಲಿದೆ. ದೇಶದಲ್ಲಿ 10 ಸಾವಿರ ಪರಿಣಿತರನ್ನು ಉತ್ಪಾದಿಸಲಿವೆ. 70 ದೇಶಗಳ ಜೊತೆ 155 ಒಪ್ಪಂದ ಮಾಡಿಕೊಂಡಿದೆ. ರಾಷ್ಟ್ರೀಯ ಅಪರಾಧ ಮಾಹಿತಿ ಬ್ಯೂರೊದಲ್ಲಿ ಒಂದುವರೆ ಕೋಟಿ ಅಪರಾಧಿಗಳ ಫಿಂಗರ್ ಪ್ರೀಂಟಿಂಗ್ ದಾಖಲಿಸಲಾಗಿದೆ. ಅಪರಾಧಿಗಳನ್ನು ತಕ್ಷಣವೆ ಪತ್ತೆ ಹಚ್ಚಲು ಉಪಯೋಗವಾಗಲಿದೆ. ವೈಜ್ಞಾನಿಕ ಪರಿಣಿತಿ, ಸಂಶೋಧನಾ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗುವುದು ಎಂದರು.