ಕಬ್ಜ' ಮೀರಿಸಿ 'ಕಾಂತಾರ' ಹೊಸ ದಾಖಲೆ: ಮತ್ತೆ ಶುರುವಾಗುತ್ತಿದೆ ಕಾಡುಬೆಟ್ಟು ಶಿವನ ಆರ್ಭಟ
ಕನ್ನಡದ ಹೆಮ್ಮೆಯ 'ಕಾಂತಾರ' ಸಿನಿಮಾ ತೆರೆಗಪ್ಪಳಿಸಿ 6 ತಿಂಗಳು ಕಳೆಯುತ್ತಾ ಬಂದರೂ ಆರ್ಭಟ ಮಾತ್ರ ಇನ್ನು ಕಮ್ಮಿ ಆಗ್ತಿಲ್ಲ. ಥಿಯೇಟರ್ನಲ್ಲಿ 400 ಕೋಟಿ ರೂ. ಕಲೆಕ್ಷನ್ ಮಾಡಿದ ಸಿನಿಮಾ ಓಟಿಟಿ, ಟಿವಿಯಲ್ಲಿ ದಾಖಲೆಯ ಪ್ರದರ್ಶನ ಕಂಡಿತ್ತು. ಇತ್ತೀಚೆಗೆ ಇಂಗ್ಲೀಷ್ಗೂ ಡಬ್ ಆಗಿ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆಗಿತ್ತು.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸಿನಿಮಾ ಬರೀ ಕನ್ನಡದಲ್ಲಿ ಮಾತ್ರ ನಿರ್ಮಾಣವಾಗಿ ಸೆಪ್ಟೆಂಬರ್ 30ರಂದು ತೆರೆಕಂಡಿತ್ತು. ಆದರೆ ನೋಡ ನೋಡುತ್ತಲೇ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿಬಿಡ್ತು. ರಿಷಬ್ ಕನ್ನಡದಲ್ಲೇ ಕನ್ನಡ ಮಣ್ಣಿನ ಕಥೆಯನ್ನು ಪ್ರಪಂಚಕ್ಕೆ ಹೇಳುವ ಪ್ರಯತ್ನ ಮಾಡಿದ್ದರು. ಆದರೆ ಪರಭಾಷಿಕರು ಒತ್ತಡ ತಂದು ಸಿನಿಮಾ ಡಬ್ ಮಾಡಿಸಿಕೊಂಡು ನೋಡಿದ್ದರು. ಇದೀಗ ವಿದೇಶದ ಮತ್ತೆರಡು ಭಾಷೆಗಳಿಗೆ ಸಿನಿಮಾ ಡಬ್ ಆಗಿ ಅಲ್ಲಿನ ಥಿಯೇಟರ್ಗಳಲ್ಲೇ ರಿಲೀಸ್ ಆಗುತ್ತಿದೆ. ಈ ವಿಚಾರವನ್ನು ಖುದ್ದು ಹೊಂಬಾಳೆ ಸಂಸ್ಥೆ ಘೋಷಿಸಿದೆ.
ಇಟಾಲಿಯನ್ ಹಾಗೂ ಸ್ಪ್ಯಾನಿಷ್ ಭಾಷೆಗಳಲ್ಲಿ 'ಕಾಂತಾರ' ಸಿನಿಮಾ ಡಬ್ ಆಗಿ ರಿಲೀಸ್ ಆಗ್ತಿದೆ. ವಿದೇಶಿಗರಿಂದ ಭಾರೀ ಬೇಡಿಕೆ ಇರುವುದರಿಂದ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಈ ಬಗ್ಗೆ ಹೊಂಬಾಳೆ ಸಂಸ್ಥೆ ಟ್ವೀಟ್ ಮಾಡಿದ್ದು "ಅಂತರಾಷ್ಟ್ರೀಯ ಪ್ರೇಕ್ಷಕರಿಂದ ಬರುತ್ತಿರುವ ಭಾರೀ ಬೇಡಿಕೆಗೆ ಧನ್ಯವಾದಗಳು. ನಾವು 'ಕಾಂತಾರ' ಚಿತ್ರವನ್ನು ಇಟಾಲಿಯನ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಡಬ್ ಮಾಡುತ್ತಿದ್ದೇವೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ" ಎಂದು ಟ್ವೀಟ್ ಮಾಡಿ ತಿಳಿಸಿದೆ. ಈಗಾಗಲೇ ತುಳು, ಇಂಗ್ಲೀಷ್ ಸೇರಿ 6 ಭಾಷೆಗಳಿಗೆ 'ಕಾಂತಾರ' ಡಬ್ ಆಗಿತ್ತು.
ಆರ್. ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ಒಡಿಯಾ, ಬೆಂಗಾಳಿ ಸೇರಿ 6 ಭಾಷೆಗಳಿಗೆ ಡಬ್ ಆಗಿತ್ತು. ಕಾಂತಾರ ಅದನ್ನೆಲ್ಲಾ ಮೀರಿ 8 ಭಾಷೆಗಳಿಗೆ ಡಬ್ ಆದಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲ ಸಿನಿಮಾ 'ಕಾಂತಾರ' ಎನ್ನಬಹುದು. ಈ ವಿಚಾರದಲ್ಲೂ ರಿಷಬ್ ಶೆಟ್ಟಿ ಸಿನಿಮಾ 'KGF' ಸರಣಿ ಸಿನಿಮಾಗಳನ್ನು ಮೀರಿಸಿದೆ. ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳು ವಿದೇಶಿ ಭಾಷೆಗಳಿಗೆ ಹೆಚ್ಚು ಹೆಚ್ಚು ಡಬ್ ಆಗಿ ರಿಲೀಸ್ ಆಗುತ್ತಿದೆ. ಇತ್ತೀಚೆಗೆ ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಜಪಾನ್ ಭಾಷೆಗೆ ಡಬ್ ಆಗಿ ದಾಖಲೆಯ ಕಲೆಕ್ಷನ್ ಮಾಡಿತ್ತು. ಜಪಾನ್ನಲ್ಲಿ ಶತದಿನೋತ್ಸವ ಆಚರಿಸಿಕೊಂಡಿತ್ತು. ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ರಷ್ಯಾ ಭಾಷೆಗೆ ಡಬ್ ಆಗಿ ಅಲ್ಲಿನ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತ್ತು.
'ಕಾಂತಾರ' ಕ್ರೇಜ್ ನೋಡುತ್ತಿದ್ದರೆ ಪ್ರೀಕ್ವೆಲ್ 10 ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿ ಪ್ರದರ್ಶನ ಕಂಡರೂ ಅಚ್ಚರಿ ಪಡಬೇಕಿಲ್ಲ. ಈ ಬಾರಿ ಆಸ್ಕರ್ ಮೇಲೂ ಕಣ್ಣಿಟ್ಟಿರುವ ಹೊಂಬಾಳೆ ಸಂಸ್ಥೆ ಈಗಿನಿಂದಲೇ ಅದಕ್ಕಾಗಿ ಕಸರತ್ತು ನಡೆಸುತ್ತಿದೆ. ವಿದೇಶಗಳಲ್ಲಿ ದೊಡ್ಡಮಟ್ಟಕ್ಕೆ ಚಿತ್ರವನ್ನು ತಲುಪಿಸುವ ಹಾಗೂ ಪ್ರಚಾರ ಮಾಡುವ ಪ್ರಯತ್ನದಲ್ಲಿದೆ. ಒಟ್ನಲ್ಲಿ 'ಕಾಂತಾರ' ಸಿನಿಮಾ ಇಟಾಲಿಯನ್ ಹಾಗೂ ಸ್ಪ್ಯಾನಿಷ್ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿರುವುದು ಕನ್ನಡಿಗರಿಗೆ ಸಂತಸ ತಂದಿದೆ. ಸದ್ಯ ರಿಶಬ್ ಶೆಟ್ಟಿ 'ಕಾಂತಾರ' ಸಿನಿಮಾ ಪ್ರೀಕ್ವೆಲ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.
ಈಗಾಗಲೇ 'ಕಾಂತಾರ' ಪ್ರೀಕ್ವೆಲ್ ಪ್ರೀ ಪ್ರೊಡಕ್ಷನ್ ವರ್ಕ್ ಶುರುವಾಗಿದೆ. ಜುಲೈ ವೇಳೆಗೆ ಶೂಟಿಂಗ್ ಶುರು ಮಾಡಿ ಮುಂದಿನ ವರ್ಷ ಏಪ್ರಿಲ್ ವೇಳೆಗೆ ಮತ್ತೆ ಪ್ರೇಕ್ಷಕರಿಗೆ ಕರಾವಳಿಯ ಮಣ್ಣಿನ ಕಥೆಯನ್ನು ತೋರಿಸುವ ಲೆಕ್ಕಾಚಾರ ನಡೀತಿದೆ. ಇತ್ತೀಚೆಗೆ ರಿಷಬ್ ವಿಶ್ವಸಂಸ್ಥೆಯ ವಾರ್ಷಿಕ ಸಭೆಯ ಮಾನವ ಹಕ್ಕು ಸಂರಕ್ಷಣೆ ಪರಿಷತ್ತಿನ 28ನೇ ಸಭೆಯಲ್ಲಿ ಪರಿಸರ ಸಂರಕ್ಷಣೆ ವಿಷಯವಾಗಿ ಭಾಷಣ ಮಾಡಿದರು. ಬಿಳಿ ಬಣ್ಣದ ಖುರ್ತಾ ಧರಿಸಿ ಅದಕ್ಕೊಪ್ಪುವ ನೀಲಿ ಬಣ್ಣದ ವೇಸ್ ಕೋಟು ಧರಿಸಿದ್ದ ರಿಷಬ್ ಶೆಟ್ಟಿ ಕನ್ನಡದಲ್ಲೇ ಭಾಷಣ ಮಾಡಿದ್ದು ವಿಶೇಷ.