ಉತ್ತರ ನೆವಾಡಾದಲ್ಲಿ ವೈದ್ಯಕೀಯ ವಿಮಾನ ಪತನ; ರೋಗಿ ಸೇರಿ 5 ಮಂದಿ ಸಾವು

ಸ್ಟೇಜ್‌ಕೋಚ್: ಉತ್ತರ ನೆವಾಡಾದ ಪರ್ವತ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ವೈದ್ಯಕೀಯ ವಿಮಾನವೊಂದು ಪತನಗೊಂಡಿದ್ದು, ರೋಗಿ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ನೆವಾಡಾದ ಸ್ಟೇಜ್‌ಕೋಚ್ ಬಳಿ ಶುಕ್ರವಾರ ರಾತ್ರಿ 9:15 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಹವಾಮಾನ ವೈಪರೀತ್ಯದ ನಡುವೆಯೂ ಪರ್ವತ ಪ್ರದೇಶದಲ್ಲಿ ರೋಗಿಯನ್ನು ತುರ್ತು ಚಿಕಿತ್ಸೆಗಾಗಿ ಈ ಚಿಕ್ಕ ವಿಮಾನದಲ್ಲಿ ಸಾಗಿಸಲಾಗುತ್ತಿತ್ತು. ಪತನಕ್ಕೀಡಾದ ಈ ವಿಮಾನ ನೆಲಕ್ಕಪ್ಪಳಿಸಿದ್ದು, ಹೊತ್ತಿ ಉರಿದಿದೆ. ಇದರಿಂದಾಗಿ, ವಿಮಾನದಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದಾರೆ.
ಘಟನೆ ಬಗ್ಗೆ ಅಧಿಕಾರಿಗಳು ಕರೆ ಸ್ವೀಕರಿಸಿದ್ದು, ನಾವು ಘಟನಾ ಸ್ಥಳಕ್ಕೆ ತಲುಪಲು ಸುಮಾರು ಎರಡು ಗಂಟೆ ಸಮಯ ತೆಗೆದುಕೊಂಡಿತು. ಅಷ್ಟರಲ್ಲಾಗಲೇ ವಿಮಾನದಲ್ಲಿದ್ದವರೆಲ್ಲರೂ ಮೃತಪಟ್ಟಿದ್ದರು ಎಂದು ಲಿಯಾನ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.