ಇಂದು ಮಲ್ಟಿಪ್ಲೆಕ್ಸ್‌ಗಳಲ್ಲಿ ₹75 ಕ್ಕೆ ನಿಮಗೆ ಬೇಕಾದ ಸಿನಿಮಾ ನೋಡಿ

ಇಂದು ಮಲ್ಟಿಪ್ಲೆಕ್ಸ್‌ಗಳಲ್ಲಿ ₹75 ಕ್ಕೆ ನಿಮಗೆ ಬೇಕಾದ ಸಿನಿಮಾ ನೋಡಿ

ಬೆಂಗಳೂರು: ರಾಷ್ಟ್ರೀಯ ಸಿನಿಮಾ ದಿನಾಚರಣೆ 2022ರ ಅಂಗವಾಗಿ ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಹೊರತುಪಡಿಸಿ ದೇಶದಾದ್ಯಂತ ಸೆ. 23 ರಂದು ₹75 ಕ್ಕೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ.

ಈ ಕುರಿತು ಮಲ್ಟಿಪ್ಲೆಕ್ಸ್‌ ಅಸೋಶಿಯೇಷನ್ ಆಫ್ ಇಂಡಿಯಾ (ಎಂಎಐ) ಟ್ವೀಟ್ ಪ್ರಕಟಣೆ ನೀಡಿದೆ.

ಹೀಗಾಗಿ ಮೇಲಿನ ಮೂರು ರಾಜ್ಯಗಳನ್ನು ಹೊರತುಪಡಿಸಿ ದೇಶದ ಯಾವುದೇ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಸಿನಿಮಾ ಆಸಕ್ತರು ಯಾವುದೇ ಸಿನಿಮಾವವನ್ನು ಒಂದು ದಿನಕ್ಕೆ ಸೀಮಿತವಾಗಿ ₹75 ಮಾತ್ರ ಕೊಟ್ಟು ನೋಡಬಹುದಾಗಿದೆ.

ವಿಶೇಷವೆಂದರೆ ಎಂಎಐ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು ಈ ನಡೆಯಿಂದ ಮಲ್ಟಿಪ್ಲೆಕ್ಸ್‌ ಇತಿಹಾಸದಲ್ಲೇ ದಾಖಲೆಯ ಟಿಕೆಟ್‌ಗಳು ಮುಂಗಡವಾಗಿ ಬುಕ್ ಆಗಿವೆ ಎಂದು ತಿಳಿಸಿದೆ.

ಕೊರೊನಾ ನಂತರ ಚಿತ್ರಮಂದಿರಗಳಿಗೆ ಹೆಚ್ಚು ಜನರು ಬರುತ್ತಿಲ್ಲವಾದ್ದರಿಂದ ಹಾಗೂ ಚಿತ್ರಮಂದಿರಗಳ ಗತವೈಭವವನ್ನು ಮರುಕಳಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎಂಎಐ ತಿಳಿಸಿದೆ.

ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯದಲ್ಲಿ ಟಿಕೆಟ್ ಮೇಲಿನ ಅಲ್ಲಿನ ಸರ್ಕಾರಗಳ ನಿಯಂತ್ರಣದಿಂದ ಎಂಎಐ ನ ಈ ನಿರ್ಧಾರ ಆ ರಾಜ್ಯಗಳಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಅಲ್ಲಿನ ಚಿತ್ರಪ್ರೇಮಿಗಳು ನಿರಾಶೆಯಾಗಿದ್ದಾರೆ.

ಸೆ. 23 ರಂದು ಮಲ್ಟಿಪ್ಲೆಕ್ಸ್‌ ಗಳಲ್ಲಿ ಕಡಿಮೆ ದರಕ್ಕೆ ಟಿಕೆಟ್ ನೀಡಿ ಸಿನಿಮಾ ತೋರಿಸುತ್ತಿರುವ ಎಂಐಎ ನಿರ್ಧಾರವನ್ನು ಅನೇಕ ಚಿತ್ರಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಂಶಸಿದ್ದಾರೆ.