ಪ್ರಬಲ ಭೂಕಂಪಕ್ಕೆ ನಲುಗಿದ ಟರ್ಕಿಗೆ ಸಹಾಯ ಮಾಡಲು ಭಾರತ ಸಿದ್ಧ; ಪ್ರಧಾನಿ ಮೋದಿ

ಬೆಂಗಳೂರು: ಟರ್ಕಿ, ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಇಲ್ಲಿಯವರೆಗೂ 530 ಮಂದಿ ಸಾವನ್ನಪ್ಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿನ ಸಂತ್ರಸ್ತರಿಗೆ ನೆರವಾಗಲು ಭಾರತ ಮುಂದಾಗಿದೆ.
ಭೂಕಂಪದಿಂದ ಸಂತ್ರಸ್ತರಾಗಿರುವ ಜನರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಇಂಡಿಯಾ ಎನರ್ಜಿ ವೀಕ್ 2023 ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 'ನಾವೆಲ್ಲರೂ ಟರ್ಕಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪವನ್ನು ನೋಡುತ್ತಿದ್ದೇವೆ. ಅದು ಹಲವಾರು ಜನರನ್ನು ಬಲಿ ಪಡೆದಿದೆ. ಟರ್ಕಿಯ ಸಮೀಪವಿರುವ ದೇಶಗಳಲ್ಲಿಯೂ ಸಹ ಹಾನಿಗಳ ಬಗ್ಗೆ ಶಂಕಿಸಲಾಗಿದೆ. ಭಾರತದ ಕೋಟ್ಯಾಂತರ ಜನರು ಭೂಕಂಪ ಪೀಡಿತ ಜನರೊಂದಿಗೆ ಇದ್ದಾರೆ. ಭೂಕಂಪ ಪೀಡಿತ ಜನರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಭಾರತ ಸಿದ್ಧವಾಗಿದೆ' ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ನಡೆದ ಇಂಡಿಯಾ ಎನರ್ಜಿ ವೀಕ್ 2023 ಈವೆಂಟ್‌ನಲ್ಲಿ ಇಂಡಿಯನ್ ಆಯಿಲ್ ಅಭಿವೃದ್ಧಿಪಡಿಸಿದ ಸೌರ ಅಡುಗೆ ವ್ಯವಸ್ಥೆಯ ಅವಳಿ-ಕುಕ್‌ಟಾಪ್ ಮಾದರಿಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು.
ಇಂದು ಬೆಳಗ್ಗೆ ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಇನ್ನೂ ಸಿರಿಯಾಗೂ ಇದರ ಪ್ರಭಾವ ಬೀರಿದ್ದು, ಅಲ್ಲೂ ಕೂಡ ಅನೇಕ ಮಂದಿ ಸಾವನ್ನಪ್ಪಿದ್ದಾರೆ.