ಭಾರತದಿಂದ ಮಿಷನ್-2024: ಇಂದಿನಿಂದ ಭಾರತ-ಶ್ರೀಲಂಕಾ ಟಿ20 ಸರಣಿ
ಮುಂಬಯಿ: ಕಳೆದ ಟಿ20 ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದ ಟೀಮ್ ಇಂಡಿಯಾ, ಇದೀಗ ಮುಂದಿನ ವರ್ಷದ ವಿಶ್ವಕಪ್‌ಗಾಗಿ “ಮಿಷನ್-2024′ ಯೋಜನೆಯೊಂದಿಗೆ ಅಭಿಯಾನ ಆರಂಭಿಸಲಿದೆ. ಇದಕ್ಕೆ ಹೊಸ ವರ್ಷಕ್ಕಿಂತ ಉತ್ತಮ ಸಮಯ ಬೇರೊಂದಿಲ್ಲ.
ಮಂಗಳವಾರ “ವಾಂಖೇಡೆ ಸ್ಟೇಡಿಯಂ’ನಲ್ಲಿ ಮೊದಲ ಮುಖಾಮುಖೀ ಏರ್ಪಡಲಿದೆ.
ಹೊಸ ನಾಯಕ, ಹೊಸ ಹುರುಪಿನ ಹೊಸ ಹೊಸ ಮುಖಗಳು… ಈ ರೀತಿಯಾಗಿ ಟೀಮ್ ಇಂಡಿಯಾದ ಯುವ ಪಡೆಯೊಂದು ಹೋರಾಟಕ್ಕೆ ಅಣಿಯಾಗಿದೆ. ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಈ ಸರಣಿಯಿಂದ ಬೇರ್ಪಟ್ಟಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ. ಪಾಂಡ್ಯ ಅವರನ್ನು ಟಿ20 ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ಮುಂದುವರಿ ಸುವುದು ಬಿಸಿಸಿಐ ಯೋಜನೆ. ಈ ಮೂಲಕ ಬಿಸಿ ರಕ್ತದ ಯುವ ಆಟಗಾರರನ್ನು ಹುರಿಗೊಳಿಸಿ 2024ರ ವಿಶ್ವಕಪ್‌ಗೆ ಸಶಕ್ತ ತಂಡವನ್ನು ರೂಪಿಸುವುದು ಮಂಡಳಿಯ ಗುರಿಯಾಗಿದೆ. ಇದಕ್ಕೆ ಇನ್ನೂ 18 ತಿಂಗಳಿದೆಯಾದರೂ ಶ್ರೀಲಂಕಾ ಸರಣಿಯನ್ನೇ ಮೊದಲ ಮೆಟ್ಟಿಲಾಗಿ ಮಾಡಿಕೊಳ್ಳುವುದು ಜಾಣ ನಿರ್ಧಾರ ಎಂಬುದರಲ್ಲಿ ಎರಡು ಮಾತಿಲ್ಲ.
ಅಂತೆಯೇ ಇದು ಏಕದಿನ ವಿಶ್ವಕಪ್ ವರ್ಷವೂ ಹೌದು. ಭಾರತದ ಆತಿಥ್ಯದಲ್ಲೇ ಈ ಪ್ರತಿಷ್ಠಿತ ಪಂದ್ಯಾವಳಿ ನಡೆಯಲಿದೆ. ನಮ್ಮವರ ಮೊದಲ ಆದ್ಯತೆ 50 ಓವರ್‌ಗಳ ಪಂದ್ಯಗಳಿಗಿರಬೇಕು ನಿಜ. ಆದರೆ ಮಂಡಳಿ ಬಳಿ ಇದಕ್ಕೂ ಪ್ರತ್ಯೇಕ ಕಾರ್ಯತಂತ್ರಗಳಿವೆ.
ತಂಡದ ಸ್ವರೂಪ
ನ್ಯೂಜಿಲ್ಯಾಂಡ್‌ನಲ್ಲಿ ನಡೆದ ಮಳೆಪೀಡಿತ ಟಿ20 ಸರಣಿಯನ್ನು ಹಾರ್ದಿಕ್ ಪಾಂಡ್ಯ ಪಡೆ ಜಯಿಸಿದ್ದನ್ನು ಮರೆಯುವಂತಿಲ್ಲ. ಅಲ್ಲಿಯೂ ಅನುಭವಿ ಆಟಗಾರರಿರಲಿಲ್ಲ. ಆದರೆ ರಿಷಭ್ ಪಂತ್, ಭುವನೇಶ್ವರ್ ಕುಮಾರ್ ಇದ್ದರು. ಲಂಕಾ ವಿರುದ್ಧ ಇವರಿಬ್ಬರಿಗೂ ವಿಶ್ರಾಂತಿ ನೀಡಲಾಗಿದೆ. ಅದರಲ್ಲೂ ಪಂತ್ ರಸ್ತೆ ಅಪಘಾತಕ್ಕೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಿವೀಸ್ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದ ಪಂತ್, ಕೀಪಿಂಗ್ ಕೂಡ ನಡೆಸಿದ್ದರು. ಲಂಕಾ ವಿರುದ್ಧ ಈ ಎರಡೂ ಸ್ಥಾನ ತುಂಬಬಲ್ಲ ಆಟಗಾರನೆಂದರೆ ಇಶಾನ್ ಕಿಶನ್. ಬಾಂಗ್ಲಾ ಪ್ರವಾಸದ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿ ಮೆರೆದಿರುವ ಇಶಾನ್ ಕಿಶನ್ ಪ್ರಚಂಡ ಫಾರ್ಮ್ ನಲ್ಲಿದ್ದಾರೆ.