ವಿಮಾನ ಟೇಕಾಫ್ ವೇಳೆ ಪ್ರಯಾಣಿಕನೋರ್ವ 'ಎಮರ್ಜೆನ್ಸಿ ಡೋರ್' ತೆಗೆಯುವ ಮೂಲಕ ಸಹ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನವದೆಹಲಿ: ವಿಮಾನ ಟೇಕಾಫ್ ವೇಳೆ ಪ್ರಯಾಣಿಕನೋರ್ವ 'ಎಮರ್ಜೆನ್ಸಿ ಡೋರ್' ತೆಗೆಯುವ ಮೂಲಕ ಸಹ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಡಿಸೆಂಬರ್ 10 ರಂದು ಘಟನೆ ನಡೆದಿದ್ದು, ಇಂಡಿಗೋ ವಿಮಾನಯಾನ ಸಂಸ್ಥೆಯ ‘6ಇ 7339 ಸಂಖ್ಯೆಯ ವಿಮಾನವು ಚೆನ್ನೈನಿಂದ ತಿರುಚಿನಾಪಳ್ಳಿಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ‘ಬೋರ್ಡಿಂಗ್ ಪ್ರಕ್ರಿಯೆ ವೇಳೆ ಪ್ರಯಾಣಿಕನೊಬ್ಬ ಆಕಸ್ಮಿಕವಾಗಿ ಇಂಡಿಗೊ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದಿದ್ದು, ಇದು ಗಮನಕ್ಕೆ ಬಂದ ಕೂಡಲೇ ಎಂಜಿನಿಯರ್ಗಳು ಪರಿಶೀಲನೆ ನಡೆಸಿ ಅದನ್ನು ಸರಿಪಡಿಸಿದ್ದಾರೆ. ಬಳಿಕ ವಿಮಾನವು ತಿರುಚಿನಾಪಳ್ಳಿಗೆ ಹಾರಾಟ ನಡೆಸಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಹೋದ ವರ್ಷದ ಡಿಸೆಂಬರ್ 10 ರಂದು ಘಟನೆ ನಡೆದಿದೆ’ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.
6ಇ 7339 ಸಂಖ್ಯೆಯ ವಿಮಾನವು ಚೆನ್ನೈನಿಂದ ತಿರುಚಿನಾಪಳ್ಳಿಗೆ ಹೊರಡಲು ಸಿದ್ಧವಾಗಿತ್ತು. ಈ ವೇಳೆ ಪ್ರಯಾಣಿಕರೊಬ್ಬರು ಆಕಸ್ಮಿಕವಾಗಿ ತುರ್ತು ನಿರ್ಗಮನ ದ್ವಾರ ತೆರೆದಿದ್ದರು. ಅದಕ್ಕಾಗಿ ತಕ್ಷಣವೇ ಕ್ಷಮೆಯನ್ನೂ ಕೋರಿದ್ದರು. ಬಳಿಕ ಎಂಜಿನಿಯರ್ಗಳು ಪರಿಶೀಲನೆ ನಡೆಸಿ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರಿದ್ದರು’ ಎಂದು ಇಂಡಿಗೊ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತನಿಖೆಗೆ ಆದೇಶಿಸಿದೆ. ಅಲ್ಲದೆ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಡಿಜಿಸಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.