ಅತ್ಯಾಚಾರ, ಕೊಲೆ ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

ಅತ್ಯಾಚಾರ, ಕೊಲೆ ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

ನವದೆಹಲಿ: ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗಿದ್ದ ಯುವತಿಯ ಕುಟುಂಬ ಸದಸ್ಯರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ಮಾಡಿದ್ದಾರೆ.

ಘಟನೆಯ ಕುರಿತ ವರದಿಯನ್ನು ಹಂಚಿಕೊಂಡಿದ್ದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ದಲಿತರ ಕುಟುಂಬದ ಮಗಳು ದೇಶದ ಮಗಳು ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದೂ ಅಲ್ಲದೇ ಆಕೆಯ ಶವವನ್ನು ಪೋಷಕರ ಅನುಮತಿ ಇಲ್ಲದೇ ದೆಹಲಿಯ ಹಳೆ ನಂಗಾಲ್ ಸ್ಮಶಾನದಲ್ಲಿ ದಹನ ಮಾಡಲಾಗಿತ್ತು.

ಈ ಘಟನೆಯ ಸಂಬಂಧ ದೆಹಲಿ ಸಿಎಂ ಕೇಜ್ರಿವಾಲ್ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವುದಕ್ಕೆ ಆಗ್ರಹಿಸಿದ್ದಾರೆ. ದೆಹಲಿಯಲ್ಲಿ 9 ವರ್ಷದ ಅಮಾಯಕ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ನಾಚಿಕೆಗೇಡಿನ ಸಂಗತಿ. ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆಯ ಸುಧಾರಣೆ ಅಗತ್ಯವಿದೆ. ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕಿದೆ, ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡುತ್ತೇನೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದರು.

ಪಶ್ಚಿಮ ದೆಹಲಿಯಲ್ಲಿ ಧಾರ್ಮಿಕ ಕ್ಷೇತ್ರದಲ್ಲಿದ್ದ ವ್ಯಕ್ತಿ ಹಾಗೂ ಸ್ಮಶಾನದಲ್ಲಿನ ಮೂವರು ಉದ್ಯೋಗಿಗಳು 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ ಘಟನೆ ಭಾನುವಾರ ನಡೆದಿತ್ತು. ದೆಹಲಿ ಪೊಲೀಸರು ಸಂತ್ರಸ್ತೆಯ ತಾಯಿಯ ಹೇಳಿಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿದ್ದರು.

ಸೆಕ್ಷನ್ 302, 376, 506 ರ ಅಡಿಯಲ್ಲಿ ಹಾಗೂ ಪೋಸ್ಕೊ, ಎಸ್ ಸಿ/ ಎಸ್ ಟಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಚಿತಾಗಾರವಿದ್ದ ಪ್ರದೇಶದಕ್ಕೆ ಹತ್ತಿರದಲ್ಲೇ ವಾಸಿಸುತ್ತಿದ್ದ ಬಾಲಕಿ ಸಂಜೆ 5:30ಕ್ಕೆ ಚಿತಾಗಾರದಲ್ಲಿದ್ದ ಕೂಲರ್ ನಿಂದ ನೀರು ತರಲು ಅಲ್ಲಿಗೆ ತೆರಳಿದ್ದರು.

ಸಂಜೆ 6 ಕ್ಕೆ ಬಾಲಕಿಯ ತಾಯಿಗೆ ಕರೆ ಮಾಡಿದ್ದ ಚಿತಾಗಾರದಲ್ಲಿದ್ದ ಮೂವರು ವ್ಯಕ್ತಿಗಳು ಕೂಲರ್ ನಿಂದ ನೀರು ಕುಡಿಯಬೇಕಾದರೆ ಆಕೆ ಸಾವನ್ನಪ್ಪಿದ್ದಾಳೆ ಎಂದು ಶವವನ್ನು ತೋರಿಸಿದ್ದರು. ಪೊಲೀಸರಿಗೆ ಕರೆ ಮಾಡಿದರೆ ಮರಣೋತ್ತರ ಪರೀಕ್ಷೆ ನಡೆಸಬೇಕಾದರೆ ಬಾಲಕಿಯ ಅಂಗಾಂಗಗಳನ್ನು ಕದಿಯುತ್ತಾರೆ ಎಂದು ನಂಬಿಸಿ ಬಾಲಕಿಯ ಅಂತ್ಯಸಂಸ್ಕಾರವನ್ನು ಅಲ್ಲೇ ನಡೆಸಲು ಒತ್ತಾಯಪೂರ್ವಕವಾಗಿ ಆರೋಪಿಗಳು ತಾಯಿಯನ್ನು ಒಪ್ಪಿಸಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.