ಶಿವಶಂಕರ್ ಬಂಧನ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಹಿನ್ನಡೆ

ಕೊಚ್ಚಿ: ಕೇರಳ ಪ್ರವಾಹ ಪರಿಹಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.
ಶಿವಶಂಕರ್ ಅವರನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದ್ದು, ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಇಡಿ ಅವರನ್ನು ಕಸ್ಟಡಿಗೆ ಪಡೆಯುವ ನಿರೀಕ್ಷೆಯಿದೆ.
ಶಿವಶಂಕರ್ ಅವರು ಜನವರಿ ೩೧ ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಸೋಮವಾರ ಪ್ರಾರಂಭವಾದ ಎರಡು ದಿನಗಳ ತೀವ್ರ ವಿಚಾರಣೆಯ ನಂತರ ಅವರನ್ನು ಬಂಧಿಸಲಾಗಿದೆ. ಪಿಣರಾಯಿ ವಿಜಯನ್ ಅವರ ಅಚ್ಚುಮೆಚ್ಚಿನ ಯೋಜನೆಯಾದ 'ಲೈಫ್ ಮಿಷನ್'ನಲ್ಲಿ ನಡೆದ ಅವ್ಯವಹಾರ ಸಂಬಂಧ ತನಿಖೆ ಬಳಿಕ ಈ ಬಂಧನ ನಡೆದಿದ್ದು, ಗುತ್ತಿಗೆ ಪಡೆಯಲು ನಾಲ್ಕು ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ಕಮಿಷನ್ ರೂಪದಲ್ಲಿ ಪಾವತಿಸಲಾಗಿದೆ ಎಂದು ಆರೋಪಿಸಲಾಗಿದೆ.