ಶಾಸಕ 'ಸತೀಶ್ ರೆಡ್ಡಿ' ಹತ್ಯೆಗೆ ಸಂಚು : ಬೆಚ್ಚಿ ಬೀಳಿಸುವಂತಿದೆ ಬಂಧಿತ ಆರೋಪಿಯ ಹಿನ್ನೆಲೆ..!

ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ( MLA Sathish Reddy ) ಅವರ ಹತ್ಯೆಗೆ ಸುಪಾರಿ ಪಡೆದು, ಸಂಚು ರೂಪಿಸಿದ್ದಂತ ಇಬ್ಬರನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ.
ಸದ್ಯ, ರೌಡಿ ಶೀಟರ್ ನಾಗನ ಸಹಚರರು ಎನ್ನಲಾದಂತ ಆಕಾಶ್ ಹಾಗೂ ಗಿರೀಶ್ ಎಂಬುವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿ ಗಿರೀಶ್ ಹಿನ್ನೆಲೆ ಬೆಚ್ಚಿ ಬೀಳಿಸುವಂತಿದೆ. ಹೌದು, ಈತ ಬಿಜೆಪಿ ಕೌನ್ಸಿಲರ್ ಹತ್ಯೆಯಲ್ಲಿ ಭಾಗಿಯಾಗಿದ್ದನು.2017 ರಲ್ಲಿ ನಡೆದ ಕೌನ್ಸಿಲರ್ ಶ್ರೀನಿವಾಸ ಪ್ರಸಾದ್ ಅಲಿಯಾಸ್ ಕಿತ್ತಗನಹಳ್ಳಿ ವಾಸು ಕೊಲೆ ಪ್ರಕರಣದ ಆರೋಪಿಯಾಗಿರುವ ಗಿರೀಶ್ ಸದ್ಯ ಬಿಜೆಪಿ ಶಾಸಕರ ಕೊಲೆಗೆ ಸುಪಾರಿ ಪಡೆದ ಕೇಸ್ ನಲ್ಲಿ ಬಂಧನಕ್ಕೀಡಾಗಿದ್ದಾನೆ.
ಕೌನ್ಸಿಲರ್ ಶ್ರೀನಿವಾಸ ಪ್ರಸಾದ್ ಅಲಿಯಾಸ್ ಕಿತ್ತಗನಹಳ್ಳಿ ವಾಸು ಅವರು ವಾಕಿಂಗ್ ಹೋದ ವೇಳೆ ಕೊಚ್ಚಿ ಕೊಲೆ ಮಾಡಲಾಗಿತ್ತು. ವಿಲ್ಸನ್ ಗಾರ್ಡನ್ ನಾಗನ ಸಹಚರನಾಗಿರುವ ಗಿರೀಶ್ ಮೊದಲಿಗೆ ಪೊಲೀಸರು ಬಂಧಿಸಿದ್ದಾಗ ಎಸ್ಕೇಪ್ ಆಗಿದ್ದನು. 2 ನೇ ಬಾರಿಗೆ ಆತನನ್ನು ಬಂಧಿಸಲಾಗಿತ್ತು. ಇದರ ವಿಚಾರಣೆ ಇನ್ನೂ ನ್ಯಾಯಾಲಯದ ಹಂತದಲ್ಲಿದೆ. ಶಾಸಕರು ನೀಡಿದಂತ ಮಾಹಿತಿಯ ಮೇರೆಗೆ ನಿನ್ನೆ ರೌಡಿ ಶೀಟರ್ ನಾಗನ ಸಹಚರರು ಎನ್ನಲಾದಂತ ಆಕಾಶ್ ಹಾಗೂ ಗಿರೀಶ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳು ಶಾಸಕ ಸತೀಶ್ ರೆಡ್ಡಿಯನ್ನು ಹತ್ಯೆಗೈಯೋದಕ್ಕೆ 2 ಕೋಟಿಗೆ ಸುಪಾರಿ ಪಡೆದು, ಫಾಲೋ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಇದೀಗ ಬೊಮ್ಮನಹಳ್ಳಿ ಠಾಣೆಯ ಪೊಲೀಸರು ಆಕಾಶ್, ಗಿರೀಶ್ ಎಂಬುವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.