ಕೋಹಿನೂರ್ ನೆಲಕ್ಕೆ ನಮೋ: ವೀರಭೂಮಿಗಿಂದು ಪ್ರಧಾನಿ ಆಗಮನ; ಜನರಲ್ಲಿ ಮೂಡಿದ ಕುತೂಹಲ

ಕೋಹಿನೂರ್ ನೆಲಕ್ಕೆ ನಮೋ: ವೀರಭೂಮಿಗಿಂದು ಪ್ರಧಾನಿ ಆಗಮನ; ಜನರಲ್ಲಿ ಮೂಡಿದ ಕುತೂಹಲ

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ

ಕ್ಷಿಣ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ತೊಡೆತಟ್ಟಿ ಹೋರಾಡಿದ್ದ ಸುರಪುರ ಸಂಸ್ಥಾನದ ನಾಡಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಆಗಮಿಸುತ್ತಿದ್ದು, ಗಿರಿ ಜಿಲ್ಲೆಯಲ್ಲಿ ಸಂಭ್ರಮದ ವಾತಾವರಣ ಮೂಡಿಸಿದೆ.

ನಾರಾಯಣಪುರದ ಬಸವಸಾಗರ ಜಲಾಶಯದ ಕಾಲುವೆಗೆ ನಿರ್ವಿುಸಿದ ಸ್ಕಾಡಾ ತಂತ್ರಜ್ಞಾನದ ಗೇಟ್​ಗಳನ್ನು ರಾಷ್ಟ್ರಕ್ಕೆ ಸಮರ್ಪಣೆ ಸೇರಿ ವಿವಿಧ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಪ್ರಧಾನಿ ಮೋದಿ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮಕ್ಕೆ ಗುರುವಾರ ಬೆಳಗ್ಗೆ 11ಕ್ಕೆ ಬರಲಿದ್ದಾರೆ. ಯಾದಗಿರಿ ಭೌಗೋಳಿಕವಾಗಿ ಪುಟ್ಟ ಜಿಲ್ಲೆಯಾಗಿದ್ದರೂ ಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ಗತವೈಭವ ಹೊಂದಿದ್ದು, ಇದರಲ್ಲಿ ಸುರಪುರ ಸಂಸ್ಥಾನ ವಿಶೇಷ.

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಮುಂದೆ ಬಂದಿದ್ದು ಸುರಪುರ ಸಂಸ್ಥಾನದ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ. ದೆಹಲಿ ಸಾಮ್ರಾಜ್ಯವನ್ನಾಳಿ ವಿಶ್ವದಲ್ಲೇ ಬಲಿಷ್ಠ ನಾಯಕನಾಗಬೇಕು ಎಂದು ಹವಣಿಸಿದ್ದ ಔರಂಗಜೇಬ್​ನನ್ನು ಸುರಪುರ ನೆಲದಲ್ಲಿ ಸೋಲಿಸಿದ್ದು ಸಹ ಇದೇ ವೆಂಕಟಪ್ಪ ನಾಯಕ. ಹೀಗಾಗಿ ಸುರಪುರ ಸಂಸ್ಥಾನಕ್ಕೆ ಹಲವು ವೈಶಿಷ್ಟ್ಯಗಳ ಇತಿಹಾಸವಿದೆ. ಇಂಥ ವೀರರ ನೆಲಕ್ಕೆ ಪ್ರಧಾನಿ ಆಗಮಿಸುತ್ತಿರುವ ಕಾರಣ ಗಿರಿ ಜಿಲ್ಲೆ ಜನರಲ್ಲಿ ಎಲ್ಲಿಲ್ಲದ ಸಂತಸ ಮೂಡಿಸಿದ್ದು, ದೇಶದ ಇತಿಹಾಸಕ್ಕೆ ತನ್ನದೇ ಆದ ಕೊಡುಗೆ ನೀಡಿದ ಜಿಲ್ಲೆಯನ್ನು ಮೋದಿ ಸ್ಮರಿಸುವರೇ ಎಂದು ಕಾತರದಿಂದ ಎದುರು ನೋಡುತ್ತಿದ್ದಾರೆ.

ಜಗತ್​ಪ್ರಸಿದ್ಧ ಕೋಹಿನೂರ್ ವಜ್ರ ಸಿಕ್ಕಿದ್ದು ಇಲ್ಲೇ: ಬ್ರಿಟಿಷ್ ರಾಜಮನೆತನದ ಮುಕುಟಪ್ರಾಯವಾಗಿ ಕಂಗೊಳಿಸುತ್ತಿದ್ದ ಹಾಗೂ ಇತ್ತೀಚೆಗೆ ನಿಧನ ಹೊಂದಿದ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಧರಿಸುತ್ತಿದ್ದ ಜಗತ್​ಪ್ರಸಿದ್ಧ ಕೋಹಿನೂರ್ ವಜ್ರದ ಮಣಿ ಸಿಕ್ಕಿರುವ ಸ್ಥಳ ಶಹಾಪುರ ತಾಲೂಕಿನ ಕೊಳ್ಳೂರು (ಎಂ) ಗ್ರಾಮ ಎಂಬುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. 2900 ವಜ್ರದ ಹರಳುಗಳನ್ನು ಹೊಂದಿರುವ 4000 ಕೋಟಿ ಮೌಲ್ಯದ ಈ ಅಮೂಲ್ಯ ಮಣಿ ಪ್ರಪಂಚದಲ್ಲೇ ಅತ್ಯಂತ ಹೆಸರುವಾಸಿ. 1656ರಲ್ಲಿ ವಜ್ರದ ಗಣಿ ಮಾಲೀಕ ಮೀರ್ ಜುಮುಲಾನಿಗೆ ಕೋಹಿನೂರ್ ವಜ್ರ ಸಿಕ್ಕಿತ್ತು. ಅಪರೂಪದ ವಜ್ರವನ್ನು ಆತ ಗೋಲ್ಕೊಂಡ ಸುಲ್ತಾನನಿಗೆ ಒಪ್ಪಿಸಿದ. ಈತ ದಿಲ್ಲಿ ದೊರೆ ಶಹಜಹಾನ್​ಗೆ ಇದನ್ನು ಕಾಣಿಕೆಯಾಗಿ ನೀಡಿದ ಎಂದು ಇತಿಹಾಸ ಹೇಳುತ್ತದೆ. ಖ್ಯಾತ ವಜ್ರ ಪರೀಕ್ಷಣಕಾರ ಡಾ.ಬಾಲೇ ಮತ್ತು ಲೇಖಕ ರಾಬರ್ಟ್ ಸಿವಿಲ್ ಈ ವಜ್ರ ಕೃಷ್ಣಾ ನದಿ ತಟದ ಕೊಳ್ಳೂರು (ಎಂ) ಗಣಿಯಲ್ಲಿ ಸಿಕ್ಕಿದ್ದು ಎಂದು 'ಫಾರ್ಗೆಟನ್ ಎಂಪೈರ್' ಕೃತಿಯಲ್ಲಿ ಉಲ್ಲೇಖಿಸಿದ್ದನ್ನು ಸ್ಮರಿಸಬಹುದು. 1849ರಲ್ಲಿ ಬ್ರಿಟಿಷ್ ಅಧಿಕಾರಿ ಸರ್ ಜಾನ್ ಲಾರೆನ್ಸ್ ಪಂಜಾಬ್ ಪ್ರಾಂತ್ಯ ವಶಪಡಿಸಿಕೊಂಡಾಗ ಕೋಹಿನೂರ್ ವಜ್ರ ಅವನ ಮೂಲಕ ಇಂಗ್ಲೆಂಡ್ ರಾಣಿಗೆ ತಲುಪಿ ಇಂಗ್ಲೆಂಡ್ ರಾಜವಂಶಸ್ಥರ ಕಿರೀಟದಲ್ಲಿ ಮೆರೆಯುತ್ತಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ವಿಶ್ವಪ್ರಸಿದ್ಧ ವಜ್ರ ದೊರೆತ ನಾಡಿಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದು, ಭಾರತಕ್ಕೆ ಕೋಹಿನೂರ್ ವಾಪಸ್ ತರುವ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖಿಸುವರೇ ಎಂಬ ಕುತೂಹಲ ಜನರಲ್ಲಿ ಮನೆ ಮಾಡಿದೆ.

ಡಬಲ್ ಎಂಜಿನ್ ಎಫೆಕ್ಟ್: ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ. ಪಾಟೀಲ್ 3,700 ಕೋಟಿ ರೂ. ಅಂದಾಜಿನ ವಿಸõತ ಯೋಜನಾ ವರದಿಗೆ ಈ ಹಿಂದೆ ಅನುಮೋದನೆ ಪಡೆದುಕೊಂಡಿದ್ದರೂ ಕೇಂದ್ರದ ಸಹಕಾರ ಸಿಕ್ಕಿರಲಿಲ್ಲ. ನಂತರ 2013-14ರಲ್ಲಿ ಕೇಂದ್ರ ಸರ್ಕಾರ ತ್ವರಿತ ನೀರಾವರಿ ಅಭಿವೃದ್ಧಿ ಯೋಜನೆ ಅನುದಾನದ ಸಹಯೋಗಕ್ಕೆ ಸಮ್ಮತಿಸಿತ್ತು. ಯೋಜನೆಯನ್ನು 2 ಹಂತದಲ್ಲಿ ಜಾರಿಗೆ ತೀರ್ವನಿಸಿ, ಮೊದಲ ಹಂತದಲ್ಲಿ ಎನ್​ಎಲ್​ಬಿಸಿ ಮುಖ್ಯ ಕಾಲುವೆ ಕಿ.ಮೀ. 72ರವರೆಗೆ, ಹುಣಸಗಿ ಶಾಖಾ ಕಾಲುವೆ ಕಿ.ಮೀ. 20ರವರೆಗೆ ವಿಸ್ತರಣೆ, ಆಧುನೀಕರಣ ಮತ್ತು ನವೀಕರಣಕ್ಕೆ ಶ್ರೀಕಾರ ಹಾಕಿ 2017ರಲ್ಲಿ ಪೂರ್ಣಗೊಳಿಸಲಾಯಿತು. ನೀರಾವರಿ ತಾಂತ್ರಿಕ ಅಧಿಕಾರಿಗಳು, ಸಿಬ್ಬಂದಿಗೆ ಈ ವ್ಯವಸ್ಥೆ ನಿರ್ವಹಣೆ ಬಗ್ಗೆ ಮಾಹಿತಿ, ತರಬೇತಿ ನೀಡುವ ಉದ್ದೇಶದಿಂದ ಮೊದಲ ಹಂತ ಪ್ರಾಯೋಗಿಕವೆಂದು ಪರಿಗಣಿಸಲಾಯಿತು. ನಂತರ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರದ ಅವಧಿಯಲ್ಲಿ 2ನೇ ಹಂತದ ಯೋಜನೆ ಅನುಷ್ಠಾನಗೊಂಡು ಒಟ್ಟು 475 ಕಿ.ಮೀ. ಉದ್ದದ ಮುಖ್ಯ ಕಾಲುವೆ ಹಾಗೂ ವಿತರಣಾ ಉಪಕಾಲುವೆಗಳು ಆಧುನೀಕರಣಗೊಂಡಿವೆ. ಬಸವರಾಜ ಬೊಮ್ಮಾಯಿ ನೀರಾವರಿ ಸಚಿವರಾಗಿದ್ದಾಗ ಯೋಜನೆಗೆ ಸಾಕಷ್ಟು ಒತ್ತು ನೀಡಿದ್ದರು. ಡಬಲ್ ಇಂಜಿನ್ ಸರ್ಕಾರದ ಅವಧಿಯಲ್ಲಿ ಮತ್ತಷ್ಟು ವೇಗ ನೀಡಿ ಯೋಜನೆ ಪೂರ್ಣ ಸಾಕಾರಗೊಳಿಸುವ ಮೂಲಕ ರೈತರ ಬಹುದಿನದ ಕನಸು ನನಸು ಮಾಡಲಾಗಿದೆ.

ಮಳಖೇಡದಲ್ಲಿ ಗಿನ್ನೆಸ್ ದಾಖಲೆ: ಪ್ರಧಾನಿ ನರೇಂದ್ರ ಮೋದಿ ಕಲ್ಯಾಣ ಕರ್ನಾಟಕದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗುರುವಾರ ಪ್ರವಾಸ ಕೈಗೊಳ್ಳಲಿದ್ದು, ಮಳಖೇಡದಲ್ಲಿ ಗಿನ್ನೆಸ್ ದಾಖಲೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಭೇಟಿ ಜನರ ನಿರೀಕ್ಷೆ ಹೆಚ್ಚಿಸಿದ್ದಲ್ಲದೆ ಬಿಜೆಪಿಗೆ ಬೂಸ್ಟರ್ ಡೋಸ್ ನೀಡಲಿದೆ ಎಂಬ ಲೆಕ್ಕಾಚಾರ ನಡೆದಿದ್ದು, ಎರಡೂ ಕಡೆ ಸಿದ್ಧತೆ ಪೂರ್ಣಗೊಂಡಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಐತಿಹಾಸಿಕ ಪಟ್ಟಣ, ರಾಷ್ಟ್ರಕೂಟದ ರಾಜಧಾನಿಯಾಗಿದ್ದ ಮಳಖೇಡದಲ್ಲಿ ಜರುಗಲಿರುವ ಸಮಾರಂಭದಲ್ಲಿ ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ, ಕೊಪ್ಪಳ, ರಾಯಚೂರು ಜಿಲ್ಲೆಗಳ 51,900 ತಾಂಡಾ ನಿವಾಸಿಗಳಿಗೆ ಮೋದಿ ಹಕ್ಕುಪತ್ರ ವಿತರಿಸಲಿದ್ದಾರೆ. ಇದು ಗಿನ್ನೆಸ್ ದಾಖಲೆಯಾಗಲಿದೆ. ಇದುವರೆಗೆ ಏಕಕಾಲಕ್ಕೆ ಇಷ್ಟೊಂದು ಜನರಿಗೆ ಹಕ್ಕುಪತ್ರ ವಿತರಣೆ ಮಾಡಿದ ಉದಾಹರಣೆಗಳಿಲ್ಲ.

ಇನ್ನು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೊಡೇಕಲ್-ನಾರಾಯಣಪುರ ಬಳಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸ್ಕಾಡಾ ಗೇಟ್​ಗಳ ಲೋಕಾರ್ಪಣೆ ಮತ್ತು ಚೆನ್ನೈ-ಸುರತ್ ಎಕ್ಸ್​ಪ್ರೆಸ್ ವೇ ಕಾರಿಡಾರ್​ಗೆ ಭೂಮಿಪೂಜೆ ನೆರವೇರಿಸುವರು. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಕಲಬುರಗಿ ನಿಲ್ದಾಣಕ್ಕೆ 11ಕ್ಕೆ ಬಂದಿಳಿಯಲಿರುವ ಪ್ರಧಾನಿ ಮೋದಿ, ಹೆಲಿಕಾಪ್ಟರ್ ಮೂಲಕ ಕೊಡೇಕಲ್​ಗೆ ತೆರಳುವರು. ಅಲ್ಲಿನ ಕಾರ್ಯಕ್ರಮ ಮುಗಿಸಿಕೊಂಡು ಮಧ್ಯಾಹ್ನ 2ಕ್ಕೆ ಮಳಖೇಡಕ್ಕೆ ಆಗಮಿಸಿ ಸಮಾರಂಭದಲ್ಲಿ ಭಾಗಿಯಾಗುವರು. ನಂತರ ಕಲಬುರಗಿಗೆ ಹೆಲಿಕಾಪ್ಟರ್​ನಲ್ಲಿ ಬಂದು ವಿಶೇಷ ವಿಮಾನ ಮೂಲಕ ಮುಂಬಯಿಗೆ ತೆರಳಲಿದ್ದಾರೆ.

ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಜತೆಗೆ ಅನೇಕ ಸಚಿವರು, ಅಧಿಕಾರಿಗಳು ಬುಧವಾರ ಮಧ್ಯಾಹ್ನವೇ ನಗರಕ್ಕೆ ಆಗಮಿಸಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್ ಮೂರು ದಿನಗಳಿಂದ ಕಲಬುರಗಿಯಲ್ಲೇ ಠಿಕಾಣಿ ಹೂಡಿ ಸಿದ್ಧತೆಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬಂದಿರುವ ಕಾರಣಕ್ಕೆ ಪ್ರಧಾನಿ ಮೋದಿ ಅವರಿಗೆ ಸಂಪ್ರದಾಯದಂತೆ ಕರ್ನಾಟಕ ನೆನಪಾಗಿದೆ. ಹೀಗಾಗಿ ಮೇಲಿಂದ ಮೇಲೆ ರಾಜ್ಯಕ್ಕೆ ಸೈಕಲ್ ತುಳಿಯುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಮೋದಿ ಅವರು ರಾಜ್ಯದ ಕಡೆ ಮುಖ ಮಾಡುವ ವೇಳೆಗೆ ಬಿಜೆಪಿಯ ಸುಳ್ಳಿನ ಕಾರ್ಖಾನೆಯ ಕಾರ್ವಿುಕರು ಸುಳ್ಳುಗಳ ಉತ್ಪಾದನೆಯಲ್ಲಿ ಬಿರುಸಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿಗಳಿಗೆ ಯಾವುದೇ ಗ್ಯಾರಂಟಿ ಇಲ್ಲ: ಕಾಂಗ್ರೆಸ್​ನವರು ನೀಡುವ ಗ್ಯಾರಂಟಿಗಳಿಗೆ ಯಾವುದೇ ಗ್ಯಾರಂಟಿಯಿಲ್ಲ. ಸುದೀರ್ಘಾವಧಿ ಆಡಳಿತ ನಡೆಸಿದವರು ಈ ಯೋಜನೆಗಳನ್ನು ಜಾರಿಗೆ ತರಲಿಲ್ಲವೇಕೆ? ಮುಂದೆಯೂ ತರುತ್ತಾರೆಂಬ ಭರವಸೆಯಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಣಕವಾಡಿದರು. ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದುಕೊಂಡಿದ್ದರು. ಏನೆಲ್ಲ ಪ್ರಚಾರ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಹತಾಶರಾಗಿ ಕಾರ್ಯಸಾಧುವಲ್ಲದ ಯೋಜನೆಗಳನ್ನು ಘೊಷಿಸಿ ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು. ನಾ ನಾಯಕಿ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ವಾದ್ರಾ ಗೃಹಿಣಿಯರಿಗೆ ಮಾಸಿಕ 2000 ರೂ. ಭತ್ಯೆ ಘೊಷಿಸಿದ್ದಾರೆ. ಅದಕ್ಕೂ ಮುಂಚೆಯೇ ನಾನು ಈ ಯೋಜನೆ ಪ್ರಕಟಿಸಿರುವೆ. ರಾಜ್ಯದ ಹಣಕಾಸಿನ ಲಭ್ಯತೆ, ಕಾರ್ಯಸಾಧು ಎನ್ನುವುದನ್ನು ಪರಿಗಣಿಸಿ ಯೋಜನೆ ಘೊಷಿಸಿದ್ದು, ಈ ವಿಷಯದಲ್ಲಿ ಸರ್ಕಾರ ಅತ್ಯಂತ ಗಂಭೀರವಾಗಿದೆ ಎಂದರು.

ಆದಾಯಮಿತಿ ಪರಿಷ್ಕರಣೆ ಭರವಸೆ: ವಿದ್ಯಾರ್ಥಿ ವೇತನಕ್ಕೆ ಆದಾಯ ಮಿತಿ ಪರಿಷ್ಕರಣೆ ಕೋರಿಕೆಗಳು ಬಂದಿದ್ದು, ಈ ಕುರಿತು ಪರಿಶೀಲನೆ ನಡೆಸಿ ಮುಂದಿನ ಬಜೆಟ್​ನಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಖಾಸಗಿ ಕಾಲೇಜೊಂದರಲ್ಲಿ ನಡೆದ 'ನಮ್ಮ ಹೆಮ್ಮೆ ನಮ್ಮ ಕಾಮನ್​ವ್ಯಾನ್ ಸಿಎಂ' ಯುವ ಸಂವಾದದಲ್ಲಿ ಪಾಲ್ಗೊಂಡ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ವಿದ್ಯಾರ್ಥಿ ಗಳು ಸಮರ್ಥವಾಗಿ ಎದುರಿಸಲು ರಾಜ್ಯ ಸರ್ಕಾರ ದಿಂದ ತಂತ್ರಾಂಶ (ಆಪ್) ಅಭಿವೃದ್ಧಿಪಡಿಸಿದ್ದು, ಫೆಬ್ರವರಿಯಲ್ಲಿ ಜಾರಿಗೊಳಿಸಲಾಗುವುದು. 'ವಿವೇಕ' ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳಲ್ಲಿ 8 ಸಾವಿರ ಕೊಠಡಿಗಳ ನಿರ್ಮಾಣ ಒಂದೂವರೆ ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.