ವಿಧಾನಸೌಧ ಬಳಿ 10 ಲಕ್ಷ ರೂ. ಹಣ ಪತ್ತೆ ಪ್ರಕರಣ: ಕೊನೆಗೂ ಹಣದ ಪತ್ತೆ ಹಚ್ಚಿದ ಪೊಲೀಸರು!

ಬೆಂಗಳೂರು: ವಿಧಾನಸೌಧದ ಬಳಿ ಈ ಹಿಂದೆ ಹತ್ತು ಲಕ್ಷ ರೂ. ಹಣ ಪತ್ತೆಯಾಗಿದ್ದ ಪ್ರಕರಣ ರಾಜ್ಯದಲ್ಲಿ ಭಾರೀ ಸುದ್ದಿಯಾಗಿತ್ತು. ಇದೀಗ ವಿಧಾನಸೌಧ ಠಾಣಾ ಪೊಲೀಸರು ಕೊನೆಗೂ ಹಣದ ಮೂಲವನ್ನು ಪತ್ತೆ ಹಚ್ಚಿದ್ದಾರೆ.
ಇಂಜಿನಿಯರ್ ಜಗದೀಶ್ ಮೂವರು ವ್ಯಕ್ತಿಗಳಿಂದ ಸಾಲದ ರೂಪದಲ್ಲಿ ಹಣ ಪಡೆದಿದ್ದ.
ಪೊಲೀಸರ ತನಿಖೆ ವೇಳೆ ಜಗದೀಶ್ ಮೇಲೆ ಚೆಕ್ ಬೌನ್ಸ್ ಪ್ರಕರಣ ಇರುವುದು ಬೆಳಕಿಗೆ ಬಂದಿದೆ. ಚೆಕ್ಬೌನ್ಸ್ ಪ್ರಕರಣ ಸಂಬಂಧ ಹಣ ಮರುಪಾವತಿಗೆ ಜಗದೀಶ್ ಹಣ ಹೊಂದಿಸಿದ್ದ ಎಂದು ತಿಳಿದುಬಂದಿದೆ. ಸದ್ಯ ಹಣ ಕೊಟ್ಟವರ ಹೇಳಿಕೆ ದಾಖಲಿಸಿ, ಅಂತಿಮ ಹಂತದ ತನಿಖೆಯನ್ನು ನಡೆಸಲಾಗುತ್ತಿದೆ.
ಚೆಕ್ಬೌನ್ಸ್ ಸಂಬಂಧ ಬ್ಯಾಂಕ್ ವ್ಯವಹಾರ ಮಾಹಿತಿ, ಪ್ರಕರಣ ವಿವರಗಳ ಸಂಗ್ರಹ ಮಾಡಿರುವ ವಿಧಾನಸೌಧ ಪೊಲೀಸರು ಅಂತಿಮ ಹಂತದ ತನಿಖೆ ನಡೆಸಿ, ಪ್ರಕರಣಕ್ಕೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ.
ಪ್ರಕರಣ ಹಿನ್ನೆಲೆ
ಜನವರಿ 5ರಂದು ವಿಧಾನಸೌಧದ ಪೂರ್ವ ಗೇಟ್ನಲ್ಲಿ 10 ಲಕ್ಷ ರೂಪಾಯಿ ಹಣವನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಬಗ್ಗೆ ಕೇಂದ್ರ ಡಿಸಿಪಿ ಶ್ರೀನಿವಾಸ ಗೌಡ ಹೇಳಿಕೆ ನೀಡಿ, PWD ಇಲಾಖೆಯ ಜೂನಿಯರ್ ಇಂಜಿನಿಯರ್ ಜಗದೀಶ್ ಹಣದ ಸಹಿತ ಬಂದಿದ್ದರು. ಈ ವೇಳೆ ವಿಧಾನ ಸೌಧ ಮತ್ತು ವಿಕಾಸ ಸೌಧದ ಭದ್ರತಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಹಣದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ, ಅವರ ಬಳಿ ಸರಿಯಾದ ಉತ್ತರ ಇಲ್ಲ. ಸದ್ಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿಸಿದ್ದರು. (ದಿಗ್ವಿಜಯ ನ್ಯೂಸ್)