ವಿಕಲಚೇತನ'ರಿಗೆ ಗುಡ್ ನ್ಯೂಸ್ : ಸಾಲ ಸೌಲಭ್ಯ ಸೇರಿ ವಿವಿಧ ನೆರವು ಪಡೆಯಲು ಅರ್ಜಿ ಆಹ್ವಾನ
ಮಡಿಕೇರಿ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ವತಿಯಿಂದ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರ್ಹರಿಗೆ ತಲುಪಿಸಲಾಗುತ್ತಿದೆ.
ಆ ನಿಟ್ಟಿನಲ್ಲಿ ಯಂತ್ರಚಾಲಿತ ವಾಹನ, ಸಹಾಯಧನದಡಿ ಸಾಲ ಯೋಜನೆ, ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಾಧನ ಸಲಕರಣೆಗಳ ವಿತರಣೆ(ವೀಲ್ ಚೇರ್, ಲ್ಯಾಪ್‍ಟಾಪ್, ಬ್ರೈಲ್ ಕಿಟ್, ಹೊಲಿಗೆ ಯಂತ್ರ, ವಿಕಲಚೇತನರಿಗೆ ಗುರುತಿನ ಚೀಟಿ(ಯುಡಿಐಡಿ), ಶಿಶು ಪಾಲನಾ ಭತ್ಯೆ, ವೈದ್ಯಕೀಯ ಮರುಪಾವತಿ, ವಿವಾಹ ಪ್ರೋತ್ಸಾಹಧನ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಅರ್ಹ ವಿಕಲಚೇತನರಿಗೆ ತಲುಪಿಸಲಾಗುತ್ತದೆ.
ಆದರೆ ಈ ಕಾರ್ಯಕ್ರಮಗಳ ಸಂಬಂಧ ಮಧ್ಯವರ್ತಿಗಳು ಪ್ರವೇಶ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಆದ್ದರಿಂದ ಅರ್ಹ ವಿಕಲಚೇತನರು ತಾವು ಅಥವಾ ತಮ್ಮ ಕುಟುಂಬದವರ ಜೊತೆ ನೇರವಾಗಿ ನಗರದ ಮೈಸೂರು ರಸ್ತೆಯಲ್ಲಿರುವ ಚೈನ್‍ಗೇಟ್ ಬಳಿಯ ಕಚೇರಿಗೆ ಆಗಮಿಸಿ ಮಾಹಿತಿ ಪಡೆಯಲು ಕೋರಿದೆ.ಕಚೇರಿಗೆ ಆಗಮಿಸಲು ಸಾಧ್ಯ ಇಲ್ಲದಿರುವ ವಿಕಲಚೇತನರು 08272-295829 ನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಿದಲ್ಲಿ ತಾವು ಇರುವ ಸ್ಥಳಕ್ಕೆ ಇಲಾಖೆಯ ಅಧಿಕಾರಿ/ ಸಿಬ್ಬಂದಿಗಳು ಖುದ್ದಾಗಿ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದುಕೊಂಡು ಅರ್ಹ ವಿಕಲಚೇತನರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ಕೆ.ಜಿ.ವಿಮಲ ಅವರು ತಿಳಿಸಿದ್ದಾರೆ.