ವಾಯು ಮಾಲಿನ್ಯ ತಡೆಯಲು ರೋಡಿಗೆ ನೀರು ಬಿಡುತ್ತಿರುವ ದೆಹಲಿ ಸರ್ಕಾರ

ನವದೆಹಲಿ: ದೆಹಲಿಯಲ್ಲಿ ದಿನೇ ದಿನೇ ವಾಯು ಮಾಲಿನ್ಯ ಹೆಚ್ಚುತ್ತಲೆ ಇದೆ. ದೀಪಾವಳಿ ಮುಗಿದ ಮೇಲೆ ನಿಯಂತ್ರಣಕ್ಕೆ ಬರದ ಮಾಲಿನ್ಯವನ್ನು ಹಿಡಿತಕ್ಕೆ ತರಲು ದೆಹಲಿ ಸರ್ಕಾರ ಈಗ ರಸ್ತೆ ಮತ್ತು ಮರಗಳಿಗೆ ನೀರು ಬಿಡುತ್ತಿದೆ!
ವಾಯು ಮಾಲಿನ್ಯದ ಸೂಚ್ಯಾಂಕ ದೆಹಲಿಯಲ್ಲಿ ಗರಿಷ್ಟ ಮಟ್ಟದ ಮಾಲಿನ್ಯವನ್ನು ತೋರಿಸುತ್ತಿದ್ದು ಇದು ದೆಹಲಿ ಸರ್ಕಾರಕ್ಕೆ ತಲೆನೋವಾಗಿದೆ.
ಸದ್ಯಕ್ಕೆ ದೆಹಲಿ ಸರ್ಕಾರ 150 ಮೊಬೈಲ್ ಸ್ಮಾಗ್ ಗನ್ಗಳನ್ನು ಮಾಲಿನ್ಯ ನಿಯಂತ್ರಣಕ್ಕೆ ನಿಯೋಜಿಸಿದೆ. ದೆಹಲಿ ವಾತಾವರಣ ಸಚಿವ ಗೋಪಾಲ್ ರೈ 'ದೆಹಲಿಯಲ್ಲಿ 70 ಅಸೆಂಬ್ಲಿಗಳಿದ್ದು ಪ್ರತಿ ಅಸೆಂಬ್ಲಿಗೆ ಎರಡು ಸ್ಮಾಗ್ ಗನ್ಗಳನ್ನು ನಿಯೋಜಿಸಲಾಗಿದೆ. ಉಳಿದವುಗಳನ್ನು ಎಲ್ಲಿ ಹೆಚ್ಚು ಮಾಲಿನ್ಯ ಉಂಟಾಗುತ್ತಿದೆಯೋ ಅಲ್ಲಿಗೆ ಕಳುಹಿಸಲಾಗುತ್ತಿದೆ. ಪ್ರತಿ ಸ್ಮಾಗ್ ಗನ್ನಲ್ಲಿ ಏಳು ಸಾವಿರ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಇರುತ್ತದೆ' ಎಂದು ಮಾಹಿತಿ ನೀಡಿದರು. (ಏಜೆನ್ಸೀಸ್)