ರಾಮಚರಿತ್ರಮಾನಸ ಕುರಿತ ವಿವಾದಿತ ಹೇಳಿಕೆ: ಕ್ಷಮೆಗೆ ಮೌಲ್ವಿಗಳ ಆಗ್ರಹ

ರಾಮಚರಿತ್ರಮಾನಸ ಕುರಿತ ವಿವಾದಿತ ಹೇಳಿಕೆ: ಕ್ಷಮೆಗೆ ಮೌಲ್ವಿಗಳ ಆಗ್ರಹ

ಯೋಧ್ಯೆ (ಪಿಟಿಐ): 'ರಾಮಚರಿತ್ರಮಾನಸ' ಕುರಿತ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರ ಹೇಳಿಕೆಯನ್ನು ಮುಸ್ಲಿಂ ಧರ್ಮಗುರುಗಳ ಒಂದು ಗುಂಪು ಸೋಮವಾರ ಖಂಡಿಸಿದೆ. ಅಲ್ಲದೇ ಈ ಬಗ್ಗೆ ತಕ್ಷಣವೇ ಕ್ಷಮೆಯಾಚಿಸಿ, ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆಯೂ ಆಗ್ರಹಿಸಿದೆ.

ಮೌರ್ಯ ಅವರು ತಕ್ಷಣವೇ ಕ್ಷಮೆಯಾಚಿಸಬೇಕು. ವಿವಾದಿತ ಹೇಳಿಕೆ ಹಿಂಪಡೆಯಬೇಕು ಎಂದು ಉತ್ತರ ಪ್ರದೇಶದ ಭಾರತೀಯ ಜನತಾ ಪಕ್ಷ ಒತ್ತಾಯಿಸಿದೆ.

'ಹಿಂದೂ ಧರ್ಮ ಹಾಗೂ ಗ್ರಂಥಗಳ ಬಗ್ಗೆ ನಮಗೆ ಗೌರವ ಇದೆ. ಮುಸ್ಲಿಮರ ಪರವಾಗಿ, ಮೌರ್ಯ ಅವರ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸುತ್ತೇನೆ' ಎಂದು ಲಖನೌದ ಟೀಲೆ ವಾಲಿ ಮಸೀದಿಯ ಮುತಾವಲ್ಲಿ ಮೌಲಾನಾ ವಾಸಿಫ್ ಹಸನ್ ಹೇಳಿದ್ದಾರೆ.

'16ನೇ ಶತಮಾನದಲ್ಲಿ, ಮೊಘಲರ ಆಳ್ವಿಕೆಯಲ್ಲಿ ಅಯೋಧ್ಯೆಯಲ್ಲಿ ಸಂತ ತುಳಸಿ ದಾಸ್ ಅವರು ಅವಧಿ ಭಾಷೆಯಲ್ಲಿ ರಾಮಚರಿತ್ರಮಾನಸ ಮಹಾಕಾವ್ಯ ಬರೆದಿದ್ದಾರೆ. ಇಂದಿಗೂ ರಾಮಚರಿತಮಾನಸದ ಶ್ಲೋಕಗಳು ನೈತಿಕ ಸಮಾಜ, ಆದರ್ಶ ಕುಟುಂಬ ವ್ಯವಸ್ಥೆಯ ಸಂದೇಶ ಸಾರುತ್ತದೆ' ಎಂದು ಅಯೋಧ್ಯೆಯ ಶಾಹಿದ್‌ ಮಸೀದಿಯ ಇಮಾಮ್ ಮೌಲಾನಾ ಸಿರಾಜ್ ಅಹ್ಮದ್ ಖಾನ್ ಹೇಳಿದ್ದಾರೆ.

'ರಾಮಚರಿತ್ರಮಾನಸದ ಕೆಲವು ಭಾಗವು ಜಾತಿಯ ಆಧಾರದ ಮೇಲೆ ಸಮಾಜದ ದೊಡ್ಡ ವರ್ಗವನ್ನು ಅವಮಾನಿಸುತ್ತದೆ. ಈ ಕಾವ್ಯವನ್ನು ನಿಷೇಧಿಸಬೇಕು' ಎಂದು ಮೌರ್ಯ ಅವರು ಭಾನುವಾರ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಮೌರ್ಯ ಅವರ ಹೇಳಿಕೆ ವೈಯಕ್ತಿಕವಾದುದು ಎಂದಿರುವ ಸಮಾಜವಾದಿ ಪಕ್ಷವು, ಈ ವಿವಾದದಿಂದ ಅಂತರ ಕಾಯ್ದುಕೊಂಡಿದೆ.