ಭ್ರಷ್ಟಾಸುರ ಬೊಮ್ಮಾಯಿ ರಣದೀಪ್ ಸುರ್ಜೆವಾಲ ವಾಗ್ದಾಳಿ
ಬೆಂಗಳೂರು: ಭ್ರಷ್ಟಾಚಾರ ವಿಚಾರವಾಗಿ ಬಿಜೆಪಿ ಸರ್ಕಾರ ಬ್ರಾಂಡ್ ಸೃಷ್ಟಿ ಮಾಡಿದೆ ಎಂದು ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ , ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು 'ಭ್ರಷ್ಟಾಸುರ ಬೊಮ್ಮಾಯಿ' ಎಂದು ಜರೆದಿದ್ದಾರೆ.
ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 650 ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಿಲ್ಲ. ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ. ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಮಹಿಳೆಯರಿಗೂ ಸರ್ಕಾರ ಮೋಸ ಮಾಡಿದೆ. ಸ್ತ್ರೀ ಉನ್ನತಿ ನಿಧಿಗೆ ಏನಾಗಿದೆ ಎಂಬುದಕ್ಕೆ ಉತ್ತರ ದೊರೆಯದಾಗಿದೆ. ಯುವಕರಿಗೆ ಕೊಟ್ಟ ಭರವಸೆಯನ್ನೂ ಈಡೇರಿಸಿಲ್ಲ.
ಸರ್ಕಾರಿ ಉದ್ಯೋಗ ಕೊಡುವ ಕೆಲಸವನ್ನೂ ಮಾಡಿಲ್ಲ. ಎಸ್ಸಿ, ಎಸ್ಟಿ, ಒಬಿಸಿ ಜನರಿಗೆ 81 ಭರವಸೆ ನೀಡಲಾಗಿತ್ತು. ಶಿಕ್ಷಣ ಹಾಗೂ ಆರೋಗ್ಯಕ್ಕೆ ಕೊಟ್ಟ ಭರವಸೆಗಳನ್ನೂ ಈಡೇರಿಸಿಲ್ಲ ಎಂದು ಸುರ್ಜೆವಾಲ ಪಟ್ಟಿ ಮಾಡಿದ್ದಾರೆ.
ಕಾಂಗ್ರೆಸ್ನ ಇತರ ನಾಯಕರಾದ ಎಂ.ಬಿ.ಪಾಟೀಲ್, ಕೆ.ಹೆಚ್.ಮುನಿಯಪ್ಪ, ಪ್ರಿಯಾಂಕ್ ಖರ್ಗೆ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಎರಡನೇ ಬಜೆಟ್ ಅನ್ನು ನಾಳೆ (ಫೆ. 17) ಮಂಡನೆ ಮಾಡಲಿದ್ದಾರೆ. ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಇದಾಗಿರಲಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಬಜೆಟ್ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಟಿಪ್ಪು ಸುಲ್ತಾನ್ ವಿಚಾರವಾಗಿ ಸಚಿವ ಅಶ್ವಥ್ ನಾರಾಯಣ್ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ರಣದೀಪ್ ಸಿಂಗ್ ಸುರ್ಜೆವಾಲ, ಬಿಜೆಪಿಯವರು ಮಹಾತ್ಮ ಗಾಂಧಿಯನ್ನೇ ಕೊಂದವರು. ಹಿಂಸೆ ಅನ್ನುವುದು ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರನ್ನೇ ಬಿಟ್ಟಿಲ್ಲ.
ಬಿಜೆಪಿ ಅಶಾಂತಿ ಹಾಗೂ ಹಿಂಸೆಯನ್ನು ಮುಂದುವರಿಸುವ ಧೋರಣೆಯನ್ನು ಹೊಂದಿದೆ. ಅಶ್ವಥ್ ನಾರಾಯಣ್, ನಳಿನ್ ಕುಮಾರ್ ಕಟೀಲು ಹಾಗೂ ಅವರ ತಂಡಕ್ಕೆ ಆತಂಕ ಇದೆ. ರಾಜ್ಯದಲ್ಲಿ ಬಿಜೆಪಿ ಎದುರಿಸುತ್ತಿರುವ ಆತಂಕ ಈ ರೀತಿ ಅವರ ಬಾಯಿಯಿಂದ ಹೊರಬಂದಿದೆ. ನಾಯಕರ ಮಾತುಗಳಲ್ಲಿ ಅವರಿಗಿರುವ ಆತಂಕ ಕಾಣಿಸುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಆತಂಕ ಇದೆ ಎಂದು ಸುರ್ಜೆವಾಲ ಹೇಳಿದರು.