ರಾಜ್ಯದ ಹಲವೆಡೆ ನಾಲ್ಕೈದು ದಿನ ಭಾರಿ ಮಳೆ ಸಾಧ್ಯತೆ: ಕರಾವಳಿಯಲ್ಲೂ ಗುಡುಗು-ಮಿಂಚು ಸಹಿತ ಮಳೆ

ರಾಜ್ಯದ ಹಲವೆಡೆ ನಾಲ್ಕೈದು ದಿನ ಭಾರಿ ಮಳೆ ಸಾಧ್ಯತೆ: ಕರಾವಳಿಯಲ್ಲೂ ಗುಡುಗು-ಮಿಂಚು ಸಹಿತ ಮಳೆ

ಬೆಂಗಳೂರು: Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಕರಾವಳಿಯಲ್ಲಿ ಗುರುವಾರ ಸಂಜೆ ಗುಡುಗು ಸಹಿತ ಭಾರಿ ಮಳೆ ಸುರಿದಿದೆ.

ರಾಜ್ಯದಲ್ಲಿ ಇನ್ನೂ ನಾಲ್ಕೈದು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಂಭವವಿದೆ. ಉತ್ತರ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗುರುವಾರ ಬೆಳಗ್ಗೆ ಚಳಿಯ ಜೊತೆ ತುಂತುರು ಮಳೆ ಸುರಿದಿತ್ತು. ಶುಕ್ರವಾರ ಕೂಡ ಮೋಡ ಕವಿದ ವಾತಾವರಣವಿದ್ದು, ಚಳಿಯೂ ಹೆಚ್ಚಿದೆ. ಇಂದು ಬಿಸಿಲು ಕೂಡ ಎಂಟ್ರಿ ಕೊಟ್ಟಿದೆ. ಇನ್ನು ರಾಜ್ಯದ ಕೆಲವೆಡೆ 15 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆಯಾಗಿದ್ದ ತಾಪಮಾನ ಇದೀಗ ಏರಿಕೆ ಕಂಡು ಬಂದಿದೆ. ಗರಿಷ್ಠ ತಾಪಮಾನದಲ್ಲೂ ಕೊಂಚ ಇಳಿಕೆಯಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ 10 ವರ್ಷಗಳಲ್ಲೇ ಅತ್ಯಂತ ಕಡಿಮೆ ತಾಪಮಾನ ದಾಖಲಾಗಿತ್ತು. ಚಳಿಗೆ ಬೆಂಗಳೂರು ಜನತೆ ಥರಥರ ನಡುಗುತ್ತಿದ್ದಾರೆ. ಹೊರಗಡೆ ಕಾಲಿಡಲೂ ಅಂಜುವಂತಾಗಿದೆ. ಸ್ವೆಟರ್ ಇಲ್ಲದೆ ಹೊರಹೋಗಲು ಸಾಧ್ಯವಾಗುತ್ತಿಲ್ಲ. ಇದೀಗ ಚಳಿಯ ಜೊತೆ ಮಳೆರಾಯ ಕೂಡ ಎಂಟ್ರಿ ಕೊಟ್ಟಿದ್ದು, ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.