ಮಂಡ್ಯ: ವಿಧಾನಸಭಾ ಚುನಾವಣೆ, ಅಕ್ರಮ ತಡೆಗೆ ಕಣ್ಗಾವಲು - DC ಹೆಚ್.ಎನ್‌.ಗೋಪಾಲಕೃಷ್ಣ

ಮಂಡ್ಯ: ವಿಧಾನಸಭಾ ಚುನಾವಣೆ, ಅಕ್ರಮ ತಡೆಗೆ ಕಣ್ಗಾವಲು - DC ಹೆಚ್.ಎನ್‌.ಗೋಪಾಲಕೃಷ್ಣ

ಮಂಡ್ಯ : ಕೇಂದ್ರ ಚುನಾವಣಾ ಆಯೋಗ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆ ಮಾಡಿದ್ದು ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ಜಿಲ್ಲೆಯ ಎಲ್ಲಾ ಏಳೂ ಕ್ಷೇತ್ರಗಳಲ್ಲಿ ಅಕ್ರಮ ಚಟುವಟಿಕೆ ತಡೆಯಲು 24X7 ಕಣ್ಗಾವಲು ಇರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ ಬುಧವಾರ ಹೇಳಿದರು.

ಚುನಾವಣೆ ಘೋಷಣೆಯಾದ ಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಿಲ್ಲೆಯಾದ್ಯಂತ ಜಾರಿಯಾಗಿದೆ. ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಸಹಕಾರ ನೀಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕ್ಷೇತ್ರವಾರು ಏಳು ಮಂದಿ ಚುನಾವಣಾಧಿಕಾರಿಗಳು ಏಳು ಸಹಾಯಕ ಚುನಾವಣಾಧಿಕಾರಿಗಳು ಸೇರಿ ಒಟ್ಟು 14 ಮಂದಿ ಸಿಬ್ಬಂದಿ ನೇಮಕ ಮಾಡಲಾಗಿದೆ. 16 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬ್ಯಾಲೆಟ್, ಅಂಚೆ ಮತದಾನ, ಮಾಧ್ಯಮ ನಿರ್ವಹಣೆ, ಸಂಪರ್ಕ, ಸಹಾಯವಾಣಿ, ವೀಕ್ಷಕರ ತಂಡಗಳನ್ನಾಗಿ ರಚಿಸಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ' ಎಂದರು.

ನೀತಿ ಸಂಹಿತೆ ಜಾರಿಯಾಗಿರುವ ಕಾರಣ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತು ಫಲಕ, ಬ್ಯಾನರ್‌, ಬಂಟಿಂಗ್ಸ್‌ಗಳನ್ನು ತೆರವುಗೊಳಿಸಲಾಗಿದೆ. ಸರ್ಕಾರಿ ಸ್ಥಳಗಳಲ್ಲೂ ಜಾಹೀರಾತು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಖಾಸಗಿ ವ್ಯಕ್ತಿಗಳು ಕೂಡ ತಮ್ಮ ಮನೆ, ಆಸ್ತಿಗಳಲ್ಲಿ ಜಾಹೀರಾತು ಫಲಕಗಳು, ಬಾವುಟಗಳಿದ್ದರೆ ತೆರವುಗೊಳಿಸುವಂತೆ ಸೂಚನೆ ನೀಡಲಾಗುವುದು' ಎಂದರು.

ಜಿಲ್ಲೆಯಲ್ಲಿ 1,798 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ, 317 ಕೇಂದ್ರಗಳನ್ನು ಸೂಕ್ಷ್ಮ ಮತಗಟ್ಟೆ ಎಂದು ಪರಿಗಣಿಸಲಾಗಿದೆ. ಅಂತಹ ಮತಗಟ್ಟೆಗಳ ಮೇಲೆ ಕಣ್ಗಾವಲು ಹೆಚ್ಚಳ ಮಾಡಲಾಗುವುದು. 127 ಸೆಕ್ಟರ್ ಅಧಿಕಾರಿಗಳು, 34 ಚೆಕ್ ಪೋಸ್ಟ್, 35 ಫ್ಲೈಯಿಂಗ್ ಸ್ಕ್ವಾಡ್, 21 ವಿಡಿಯೋ ಸರ್ವೇಲೆನ್ಸ್‌, 14 ತೆರಿಗೆ, 21 ಸ್ಥಿರ ಜಾಗೃತಿ ದಳ ಹಾಗೂ 70 ಮಾಸ್ಟರ್ ತರಬೇತಿದಾರರನ್ನು ನಿಯೋಜಿಸಲಾಗಿದೆ ಎಂದರು.

ಹಿಂದಿನ ಚುನಾವಣೆಗಳಲ್ಲಿ ಕಡಿಮೆ ಮತದಾನವಾಗಿರುವ ಭಾಗಗಳಲ್ಲಿ ಮತದಾನದ ಪ್ರಮಾಣ ಹೆಚ್ಚಳ ಮಾಡಲು ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕೆಲವು ಶ್ರಮಿಕ ನಿವಾಸಿಗಳು ತಮ್ಮ ಮೂಲ ಸಮಸ್ಯೆಗಳ ಇತ್ಯರ್ಥಕ್ಕೆ ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ್ದರು. ಅಲ್ಲಿಗೆ ಭೇಟಿ ನೀಡಿ ಅವರ ಬೇಡಿಕೆ ಈಡೇರಿಸುವ ಭರವಸೆ ನೀಡಲಾಗಿದೆ. ಬಹಿಷ್ಕಾರ ನಿರ್ಧಾರದಿಂದ ಅವರು ಹಿಂದೆ ಸರಿದಿದ್ದಾರೆ ಎಂದರು.

18 ವರ್ಷ ತುಂಬಿದವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಏ.11ರವರೆಗೂ ಸಮಯ ನೀಡಲಾಗಿದೆ. ನಮೂನೆ 6ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಪರಿಶೀಲನೆ ನಡೆಸಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲಾಗುವುದು ಎಂದರು.

ಏ.1ಕ್ಕೆ 18 ವರ್ಷ ತುಂಬಿದವರು ಅರ್ಜಿ ಸಲ್ಲಿಸಬಹುದು. ಈ ನಿಟ್ಟಿನಲ್ಲಿ ಯುವ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಆಕ್ಷೇಪಣೆ ಸಲ್ಲಿಸಲು 10 ದಿನಗಳ ಸಮಯ ನೀಡಿ ಚುನಾವಣೆ ನಾಮಪತ್ರ ಸಲ್ಲಿಸುವವರೆಗೂ ಹೊಸ ಮತದಾರರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಒಟ್ಟು ಮತದಾರರ ಜೊತೆಗೆ ಇನ್ನೂ 2,303 ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ ಎಂದು ಹೇಳಿದರು.

ಜನಪ್ರತಿನಿಧಿಗಳು, ನಿಗಮ, ಮಂಡಳಿಗಳ ಪದಾಧಿಕಾರಿಗಳ ಸರ್ಕಾರಿ ವಾಹನ ಹಿಂದಕ್ಕೆ ಪಡೆಯಲು ಆರ್‌ಟಿಒ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸರ್ಕಾರಿ ವಸತಿ ಗೃಹಗಳು, ಪ್ರವಾಸಿ ಮಂದಿರಗಳಲ್ಲಿ ರಾಜಕೀಯ ಚಟುವಟಿಕೆ ನಡೆಸದಂತೆ ನಿರ್ಬಂಧ ಹೇರಲಾಗಿದೆ. ಎಲ್ಲಾ ವಸತಿ ಗೃಹಗಳು ಆಯಾ ತಾಲ್ಲೂಕು ತಹಶೀಲ್ದಾರರ ಸುಪರ್ದಿಗೆ ನೀಡಲಾಗಿದೆ ಎಂದರು.

ಚುನಾವಣಾ ಆಯೋಗ ಘೋಷಣೆ ಮಾಡಿರುವಂತೆ 80 ವರ್ಷ ಮೇಲ್ಪಟ್ಟವರು, ಅಂಗವಿಕಲರು ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗುವುದು. 12ಡಿ ಅರ್ಜಿ ಸಲ್ಲಿಸಿ ಮನೆಯಿಂದ ಮತದಾನ ಮಾಡಲು ಇಚ್ಛೆ ವ್ಯಕ್ತಪಡಿಸಬಹುದು. ಜಿಲ್ಲೆಯಲ್ಲಿ 34 ಸಾವಿರ ಮಂದಿ 80 ವರ್ಷ ಮೇಲ್ಪಟ್ಟವರು, 23 ಸಾವಿರ ಮಂದಿ ಮಂದಿ ಅಂಗವಿಕಲ ಮತದಾರರು ಇದ್ದಾರೆ ಎಂದರು.

ಮಹಿಳಾ ಮತದಾರರೇ ಹೆಚ್ಚು

ಮತದಾರರ ಪಟ್ಟಿ ಪರಿಷ್ಕರಣೆಯ ನಂತರ ಇಲ್ಲಿಯವರೆಗೆ ಜಿಲ್ಲೆಯಲ್ಲಿ 15,15,894 ಮತದಾರರು ಇದ್ದಾರೆ. ಅವರಲ್ಲಿ 7,50,935 ಪುರುಷ ಮತದಾರರು ಇದ್ದರೆ, 7,64,823 ಮಹಿಳಾ ಮತದಾರರಿದ್ದಾರೆ. ಮಹಿಳಾ ಮತದಾರರೇ ಹೆಚ್ಚಿರುವುದು ವಿಶೇಷವಾಗಿದೆ. ಜಿಲ್ಲೆಯಲ್ಲಿ 136 ತೃತೀಯ ಲಿಂಗಿಗಳು ಹಕ್ಕು ಚಲಾವಣೆ ಮಾಡಲು ಅರ್ಹರಾಗಿದ್ದಾರೆ.

1.54 ಕೋಟಿ ಮೌಲ್ಯದ ವಸ್ತುಗಳ ವಶ

ಜಿಲ್ಲೆಯಲ್ಲಿ ಚುನಾವಣಾ ಅಕ್ರಮ ಸಂಬಂಧ ಇಲ್ಲಿಯವರೆಗೂ 46 ಲಕ್ಷ ನಗದು ಸೇರಿದಂತೆ 1.54 ಕೋಟಿ ಮೌಲ್ಯದ ವಸ್ತು, ಮದ್ಯ, ಡ್ರಗ್ಸ್‌, ಉಚಿತ ಉಡುಗೊರೆ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

4 ಲಕ್ಷ ಮೌಲ್ಯದ 1,009 ಲೀಟರ್‌ ಮದ್ಯ, 35 ಸಾವಿರ ಮೌಲ್ಯದ 3.5 ಕೆ.ಜಿ ಗಾಂಜಾ, 1 ಕೋಟಿ ಮೌಲ್ಯದ 4,979 ಬಾಕ್ಸ್‌ ಉಚಿತ ಉಡುಗೊರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

7 ರೌಡಿಶೀಟರ್‌ಗಳ ಗಡಿಪಾರು

ಚುನಾವಣೆ ಪ್ರಕ್ರಿಯೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ 7 ಮಂದಿ ರೌಡಿಶೀಟರ್‌ಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಈ ಕುರಿತು ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಇನ್ನೂ 7 ಮಂದಿ ರೌಡಿಶೀಟರ್‌ಗಳನ್ನು ಗಡಿಪಾರು ಮಾಡುವ ಸಂಬಂಧ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ವಿಚಾರಣಾ ಹಂತದಲ್ಲಿದೆ. ಗಡಿ ಪಾರಾದ ರೌಡಿಶೀಟರ್‌ಗಳಿಗೆ ಮತದಾನದ ಹಕ್ಕು ಇರುವುದಿಲ್ಲ ಎಂದರು.

ವರದಿ: ಗಿರೀಶ್ ರಾಜ್, ಮಂಡ್ಯ