ಸಿಇಟಿ ಪರೀಕ್ಷೆ: ಸಾಗರೋತ್ತರ, ಭಾರತೀಯ ಮೂಲದ ಅಭ್ಯರ್ಥಿಗಳಿಗೆ ನೋಂದಣಿಗೆ ಅವಕಾಶ
ಬೆಂಗಳೂರು: 2023ನೇ ಸಾಲಿನ ಸಿಇಟಿ ಪರೀಕ್ಷೆಗೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಹಾಗೂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಗರೋತ್ತರ ಭಾರತೀಯ ಅಭ್ಯರ್ಥಿಗಳಿಗೆ (ಒಸಿಐ) ಮತ್ತು ಭಾರತೀಯ ಮೂಲದ ಅಭ್ಯರ್ಥಿಗಳಿಗೆ (ಪಿಐಒ) ಅವಕಾಶ ಮಾಡಿಕೊಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಅವರು ಬುಧವಾರ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೇಲ್ಕಂಡ ವಿಭಾಗಗಳ ಅಡಿ ಬರುವ ಅರ್ಹ ಅಭ್ಯರ್ಥಿಗಳು ಮಾರ್ಚ್ 30ರ ಗುರುವಾರ ಬೆಳಿಗ್ಗೆ 11 ಗಂಟೆಯಿಂದ ಏಪ್ರಿಲ್ 5ರ ಮಧ್ಯಾಹ್ನ 12 ಗಂಟೆಯವರೆಗೆ ಈ ಪ್ರಕ್ರಿಯೆಯನ್ನು ಪೂರೈಸಿಕೊಳ್ಳಬಹುದು ಎಂದಿದ್ದಾರೆ.
ಹಾಗೆಯೇ, ಈ ವರ್ಷದ ಸಿಇಟಿಗೆ ನೋಂದಾಯಿಸಿ ಕೊಂಡಿದ್ದು ಇದುವರೆಗೂ ಪ್ರಮಾಣಪತ್ರಕ್ಕೆ ಸಂಬಂಧಿಸಿದ ವಿವರಗಳನ್ನು ಪೂರ್ಣಗೊಳಿಸದೆ ಇರುವ ಸಿಬಿಎಸ್‌ಇ, ಸಿಐಸಿಜಿಇ ಮತ್ತು ಐಜಿಸಿಎಸ್‌ಇ ಅಭ್ಯರ್ಥಿಗಳಿಗೆ ಕೂಡ ಈ ಪ್ರಕ್ರಿಯೆ ಪೂರೈಸಲು ಮಾರ್ಚ್ 31ರಿಂದ ಏಪ್ರಿಲ್ 3ರವರೆಗೆ ಅವಕಾಶ ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.