ಬೆಂಗಳೂರು ಏರ್‌ಫೋರ್ಟ್: ನ.11ರ ಬೃಹತ್ ಕಾರ್ಯಕ್ರಮಗಳ ಸಿದ್ಧತೆ ಪರಿಶೀಲಿಸಿದ ಅಶ್ವಥ್

ಬೆಂಗಳೂರು, ; ನವೆಂಬರ್ 11ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಆವರಣದಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದ ಸಿದ್ಧತೆಗಳನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಪರಿಶೀಲಿಸಿದರು.
ನವೆಂಬರ್ 11ರಂದು ಬೆಂಗಳೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಅಂದು ಕೆಐಎನಲ್ಲಿ ನಿರ್ಮಿಸಲಾಗಿರುವ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 108 ಕಂಚಿನ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ.
ಥೀಮ್ ಪಾರ್ಕ್ ಹಾಗೂ ಕೆಐಎ ಟರ್ಮಿನಲ್-2 ಅನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕೆ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ ಸೇರಿದಂತೆ ಎಲ್ಲ ಕಾರ್ಯಕ್ರಮಗಳ ಅಗತ್ಯ ಸಿದ್ಧತೆಗಳನ್ನು ಸೋಮವಾರ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಪರಿಶೀಲಿಸಿದರು.
ಲೋಪವಾಗದಂತೆ ನೋಡಿಕೊಳ್ಳಲು ಸಚಿವರ ಸೂಚನೆ
ಕೆಂಪೇಗೌಡ ಪ್ರತಿಮೆ ಸ್ಥಳದಲ್ಲಿ ಆದಷ್ಟು ಬೇಗ ಕೊನೆಯ ಹಂತದ ಕೆಲಸಗಳನ್ನು ಪೂರ್ಣಗೊಳಿಸುವಂತೆ ಸಿಬ್ಬಂದಿಗೆ ಸೂಚಿಸಿದರು. ಸಾರ್ವಜನಿಕ ಸಮಾರಂಭ ನಡೆಯುವ ಜಾಗ ವೀಕ್ಷಿಸಿದ ಅವರು ಊಟ ಮಾಡಲು ನಿಗದಿಪಡಿಸಲಾದ ಸ್ಥಳದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಸಲಹೆ ನೀಡಿದರು.
ಕಾರ್ಯಕ್ರಮಕ್ಕೆ ಅಗತ್ಯ ಎಲ್ಲ ಏರ್ಪಾಡುಗಳನ್ನು ಮಾಡಿಕೊಳ್ಳಬೇಕು. ಪ್ರಧಾನಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಭದ್ರತೆ ಸೇರಿದಂತೆ ಯಾವುದರಲ್ಲೂ ಕಿಂಚಿತ್ತೂ ಲೋಪವಾಗದಂತೆ ನೋಡಿಕೊಳ್ಳಬೇಕು. ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳ ಕಲ್ಪಿಸುವುದು ಸೇರಿದಂತೆ, ಊಟ, ತಪಾಸಣೆ ಮುಂದಾದವುಗಳನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಅವರು ಅಧಿಕಾರಿಗಳಿಗೆ ಹೇಳಿದರು.
ಕಾರ್ಯಕ್ರಮದ ಉಸ್ತುವಾರಿ ಅಧಿಕಾರಿಯೂ ಆದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಲತಾ, ಹಿರಿಯ ಅಧಿಕಾರಿಗಳಾದ ರಾಘವೇಂದ್ರ, ಅಶ್ವಿನ್ ಗೌಡ, ಬಿಜೆಪಿ ಮುಖಂಡ ಸುಬ್ಬಣ್ಣ, ದಶರಥ್ ಮತ್ತಿತರರು ಉಪಸ್ಥಿತರಿದ್ದರು.