ಬೆಂಗಳೂರು ಏರ್‌ಪೋರ್ಟ್‌ನಿಂದ 16.30 ಮಿಲಿಯನ್ ಪ್ರಯಾಣಿಕರ ಸಂಚಾರ, ದಾಖಲೆ

ಬೆಂಗಳೂರು, : ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದ ಮೂಲಕ ಸಂಚರಿಸುವವರ ಸಂಖ್ಯೆ ಈ ಪ್ರಸಕ್ತ ಸಾಲಿನಲ್ಲಿ ಸಾಕಷ್ಟು ಪ್ರಗತಿ ಕಂಡಿದೆ. ಈ ವರ್ಷದ ಅಕ್ಟೋಬರ್ ಅಂತ್ಯಕ್ಕೆ ಸುಮಾರು 16.30 ಮಿಲಿಯನ್ ಪ್ರಯಾಣಿಕರು ಆಗಮಿಸಿದ್ದಾರೆ.
ಕೆಐಎ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅದರಲ್ಲಿ ಈ ವರ್ಷ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ಕ್ಕೆ ಅಕ್ಟೋಬರ್ ಅಂತ್ಯಕ್ಕೆ ಸುಮಾರು 16.30 ಮಿಲಿಯನ್ ಪ್ರಯಾಣಿಕರು ಆಗಮಿಸಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 6.61 ಮಿಲಿಯನ್ ಪ್ರಯಾಣಿಕರು ಕೆಐಎ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ದೇಶದೊಳಗಿನ ಮಾರ್ಗ (ಡೊಮೆಸ್ಟಿಕ್)ದಲ್ಲಿ ಸುಮಾರು 14.34 ಮಿಲಿಯನ್ ಪ್ರಯಾಣಿಕರು ದೇಶೀಯ ಮಾರ್ಗಗಳಲ್ಲಿ ಪ್ರಯಾಣಿಸಿದ್ದರೆ, 1.96 ಮಿಲಿಯನ್ ಮಂದಿ ಅಂತಾರಾಷ್ಟ್ರೀಯ ಸ್ಥಳಗಳಿಗೆ ಕೆಐಎ ಮೂಲಕ ತೆರಳಿದ್ದಾರೆ ಎಂದು ಮಾಹಿತಿ ದೊರೆತಿದೆ.
ಈ ವರ್ಷದ ಅಂಕಿ ಅಂಶಗಳನ್ನು 2019ರ ಅಕ್ಟೋಬರ್ ಅಂತ್ಯಕ್ಕೆ ಹೋಲಿಸಿದರೆ ಪ್ರಸಕ್ತ ಅಕ್ಟೋಬರ್‌ನಲ್ಲಿ ದೇಶೀಯ ಪ್ರಯಾಣಿಕರ ದಟ್ಟಣೆ ಶೇ. 102 ರಷ್ಟು ಪ್ರಗತಿ ಹೊಂದಿದೆ ಮತ್ತು ಅಂತಾರಾಷ್ಟ್ರೀಯ ಪ್ರಯಾಣವು ಶೇ. 85 ಶೇ.ರಷ್ಟು ಬೆಳವಣಿಗೆ ದಾಖಲಿಸಿದೆ.
ದೀಪಾವಳಿ ವೇಳೆ ಅತ್ಯಧಿಕ ಪ್ರಯಾಣಿಕರ ಸಂಚಾರ
ರಜೆಯ ಸಂದರ್ಭದಲ್ಲಿ ಮತ್ತು ಹಬ್ಬಗಳ ವೇಳೆ ದೇಶೀಯ ಮತ್ತು ಅಂತಾರಾಷ್ಟ್ರೀಯ ವಲಯಗಳಲ್ಲಿ ಸಂಚಾರ ಹೆಚ್ಚಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಕ್ಟೋಬರ್ 21 ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 94,330 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ದೀಪಾವಳಿ ಕಬ್ಬ ಇದ್ದ ಒಟ್ಟು ಆರು ದಿನದ್ಲಿ ವಿಮಾನ ನಿಲ್ದಾಣವು 5.2 ಲಕ್ಷಕ್ಕೂ ಹೆಚ್ಚು ದೇಶೀಯ ಪ್ರಯಾಣಿಕರ ಸಂಚಾರಕ್ಕೆ ಸಾಕ್ಷಿಯಾಗಿದೆ. ಇದೇ ವೇಳೆ ಸುಮಾರು 70,000 ದಷ್ಟು ಅಂತಾರಾಷ್ಟ್ರೀಯ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ.
ಕೆಐಎ ಮೂಲಗಳ ಪ್ರಕಾರ, ಬೆಂಗಳೂರಿನಿಂದ ನವದೆಹಲಿ, ಮುಂಬೈ, ಕೋಲ್ಕತ್ತಾ, ಕೊಚ್ಚಿ ಮತ್ತು ಪುಣೆ ದೇಶೀಯ ಮಾರ್ಗದ ಕೊಡುಗೆ ಶೇ. 44 ರಷ್ಟಿದೆ. ಅದೇ ರೀತಿ ದುಬೈ, ದೋಹಾ, ಸಿಂಗಪುರ, ಫ್ರಾಂಕ್‌ಫರ್ಟ್ ಮತ್ತು ಮಾಲೆ ದೇಶಗಳಿಗೆ ಶೇ.54 ರಷ್ಟು ಮಂದಿ ಅಂತಾರಾಷ್ಟ್ರೀಯ ಪ್ರಯಾಣ ನಡೆಸಿದ್ದಾರೆ. ಇದರಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಗರದ ವಿವಿಧೆಡೆಯಿಂದ ಸಂಚರಿಸುವವರ ಸಂಖ್ಯೆ ಶೇ. 58ರಷ್ಟು ಹೆಚ್ಚಾಗಿದೆ.
ಪ್ರಯಾಣಿಕರ ಸಂಖ್ಯೆ ಇನನ್ಷ್ಟು ಏರಿಕೆ ಸಾಧ್ಯತೆ
ಈ ಹಿಂದಿನ ಎರಡು ವರ್ಷದಲ್ಲಿ ಕೊರೋನಾ ಪಿಡುಗು ವಿಮಾನ ಪ್ರಯಾಣಕ್ಕೆ ಬಹುದೊಡ್ಡ ಹೊಡೆತ ನೀಡಿತ್ತು. ಆದರೆ ಈ ವರ್ಷ ವಿಮಾನಯಾನದಲ್ಲಿ ಗಮನಾರ್ಹ ಬೆಳವಣಿಗೆ ಆಗಿದೆ. ಈ ಏರುಗತಿಯ ಚಲನೆ ಮುಂದಿನ ದಿನಗಳಲ್ಲೂ ಹೀಗೆ ಮುಂದುವರಿಯಲಿದೆ ಎಂದು ಕೆಐಎ ವಿಶ್ವಾಸ ವ್ಯಕ್ತಪಡಿಸಿದೆ.
ಬೆಂಗಳೂರು ವಿಮಾನ ನಿಲ್ದಾಣವು ಇತರ ನಗರಗಳು ಹಾಗೂ ವಿದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೇಂದ್ರವಾಗಿದೆ. ಕೆಲವೇ ದಿನಗಳಲ್ಲಿ ಈ ಕೆಐಎ ನಿಲ್ದಾಣದಲ್ಲಿ ಸ್ಥಾಪಿಸಲಾದ ಬೃಹತ್ ಟರ್ಮಿನಲ್ 2 ಅನ್ನು ಸಾರ್ವಜನಿಕ ಬಳಕೆಗೆ ಸಿದ್ಧವಾಗಿದೆ ಎಂದು ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಕೆಐಎಎಲ್) ಮುಖ್ಯ ಅಧಿಕಾರಿ ಸತ್ಯಕಿ ರಘುನಾಥ್ ತಿಳಿಸಿದರು.