ಗಂಡನಿಂದ ನಿತ್ಯವೂ ಕಿರುಕುಳ; ಮನನೊಂದ 8 ತಿಂಗಳ ಗರ್ಭಿಣಿ ಆತ್ಮಹತ್ಯೆ

ಬೆಂಗಳೂರು: ಗಂಡನ ಕಿರುಕುಳಕ್ಕೆ ಮನನೊಂದ 8 ತಿಂಗಳ ಗರ್ಭಿಣಿ ನೇಣಿಗೆ ಶರಣಾದ ಘಟನೆ ನೆಲಮಂಗಲದ ಉತ್ತರ ತಾಲೂಕು ಶಿವಪುರದಲ್ಲಿ ನಡೆದಿದೆ.
ಮೃತ ಗರ್ಭಿಣಿ ಸೌಂದರ್ಯ (19) ಒಂಭತ್ತು ತಿಂಗಳ ಹಿಂದೆ ಸಂತೋಷ್ ಎಂಬಾತನ ಜತೆಗೆ ಪ್ರೀತಿಸಿ ಮದುವೆಯಾಗಿದ್ದಳು.
ಖಾಸಗಿ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಸೌಂದರ್ಯಾಳಿಗೆ ಇತ್ತೀಚೆಗೆ ಗಾರ್ಮೆಂಟ್ಸ್ನಲ್ಲಿ ಎಲ್ಲರೂ ಸೇರಿ ಸೀಮಂತ ಕಾರ್ಯ ಮಾಡಿದ್ದರು. ಇದೀಗ ಸೌಂದರ್ಯ ಗಂಡ ಸಂತೋಷ್ ನೀಡುತ್ತಿದ್ದ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸಂತೋಷ್ ವಿರುದ್ಧ ಸೌಂದರ್ಯ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ. ಆರೋಪಿ ಸಂತೋಷ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.