ಬಿಜೆಪಿಯಿಂದ ಅಭಿವೃದ್ಧಿ ಆಗುತ್ತಿಲ್ಲ: ಶಾಸಕ ರಾಜೇಗೌಡ ಆರೋಪ

ನರಸಿಂಹರಾಜಪುರ: ಬಿಜೆಪಿ ನೇತೃತ್ವದ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದರು.
ಪಟ್ಟಣದ ಮೇದರ ಬೀದಿಯಲ್ಲಿ ಮಂಗಳವಾರ ನಗರೋತ್ಥಾನ ಯೋಜನೆಯ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
'ಪಟ್ಟಣ ಪಂಚಾಯಿತಿಗೆ ನಗರೋತ್ಥಾನ ಯೋಜನೆಯ ₹ 5 ಕೋಟಿ, ವಿಶೇಷ ಅನುದಾನ ₹ 2ಕೋಟಿ, ಒಟ್ಟು ₹ 7ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು. ಹಕ್ಕುಪತ್ರ ಇಲ್ಲದ ಮನೆಗಳಿಗೆ ಹಕ್ಕುಪತ್ರ ಕೊಡಿಸುವುದು ನಮ್ಮ ಆದ್ಯತೆ ಆಗಿದೆ. ಆದರೆ ಹಕ್ಕುಪತ್ರ ವಿತರಿಸಲು ಸಹ ಅಡ್ಡಿಪಡಿಸಲಾಗುತ್ತಿದೆ. ಕಾನೂನಿನ ಚೌಕಟ್ಟನ್ನು ಬದಲಾಯಿಸಿ ಹಕ್ಕುಪತ್ರ ವಿತರಣೆ ಮಾಡಬೇಕಾಗಿದ್ದು ಇದಕ್ಕೆ ಸಮಯ ತಗಲುತ್ತದೆ. ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಾಗ ಅರಣ್ಯ ಇಲಾಖೆ ಒಪ್ಪಿಗೆಬೇಕೆಂದು ಪತ್ರ ಬರೆದಿದ್ದೇನೆಂದು
ಮಾಜಿ ಶಾಸಕರು ಸುಳ್ಳು ಆರೋಪ ಮಾಡುವ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಮಾತನಾಡಿ, 'ಶಾಸಕರಾದ ಟಿ.ಡಿ.ರಾಜೇಗೌಡ ಎಲ್ಲ ವಾರ್ಡ್‌ಗಳಲ್ಲೂ ನಗರೋತ್ಥಾನ ಯೋಜನೆಯ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು ಕಾಮಗಾರಿಗಳು ಆರಂಭವಾಗಲಿವೆ. ಪ್ರವಾಸೋದ್ಯಮ ಇಲಾಖೆಯಿಂದ ₹ 1ಕೋಟಿ ಅನುದಾನ ತಂದು ಸಿಂಹನಗದ್ದೆ ಬಸ್ತಿಮಠದ ಜ್ವಾಲಾಮಾಲಿನಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗಿದೆ' ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಮಾತನಾಡಿ, ಬಿಜೆಪಿ ಸರ್ಕಾರ ಅಭಿವೃದ್ಧಿಗಾಗಿ ಬಂದ ಅನುದಾನವನ್ನು ತಡೆಹಿಡಿಯುವ ಕೆಲಸ ಮಾಡಿದೆ. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಇನ್ನಷ್ಟು ಅಭಿವೃದ್ಧಿ ಕಾರ್ಯಗಳಾಗಲಿವೆ. ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಿ ಅನುದಾನ ಪಡೆಯುವ ದುಃಸ್ಥಿತಿಯಿದೆ ಎಂದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಉಮಾ ಕೇಶವ್, ಸದಸ್ಯರಾದ ಮುಕುಂದ, ಮುನಾವರ್ ಪಾಷ, ಸೈಯದ್ ವಸೀಂ, ಸುರಯ್ಯಬಾನು,ಶೋಜಾ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಬಿಳಾಲ್ ಮನೆ ಉಪೇಂದ್ರ, ಮುಖಂಡರಾದ ಈ.ಸಿ.ಜೋಯಿ, ರಜಿ, ಕೆ.ಎಂ.ಸುಂದರೇಶ್, ಮಹಮ್ಮದ್ ಗೌಸ್, ಪ್ರವೀಣ್, ಬಡಾವಣೆ ನಿವಾಸಿಗಳಾದ ಮಲ್ಲೇಶ್, ಮಂಜು,ನಾಗರಾಜ್ ಇದ್ದರು.