ಕಬ್ಬಿಗೆ ಎಸ್‌ಎಪಿ ದರ ಕೊಡಿ

ಮಂಡ್ಯ: ಕಬ್ಬಿಗೆ ಎಸ್‌ಎಪಿ ದರ ನಿಗದಿಪಡಿಸಿ ಟನ್‌ಗೆ 4500 ರೂ. ದರ ಘೋಷಿಸಬೇಕು ಎಂದು ಒತ್ತಾಯಿಸಿ ನಗರದ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಮೆ ಎದುರು ರೈತ ಸಂಘದ ಕಾರ್ಯಕರ್ತರು ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ದರ ನಿಗದಿಪಡಿಸಿಲ್ಲ: ಕಬ್ಬಿಗೆ ದರ ನಿಗದಿ ಪಡಿಸುವಂತೆ ಆಗ್ರಹಿಸಿ ಮೈಸೂರು ದಸರಾ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಸ್‌ಎಪಿ ದರ ನಿಗದಿಪಡಿಸುವುದಾಗಿ ಭರವಸೆ ನೀಡಿದ್ದರು.
ಒತ್ತಡ ತರಬೇಕು: ಸರ್ಕಾರ ಕಬ್ಬಿಗೆ ಎಸ್‌ಎಪಿ ದರ ನಿಗದಿಪಡಿಸುವವರೆಗೂ ಅನಿರ್ದಿಷ್ಟಾವಧಿ ಚಳವಳಿ ಮುಂದುವರಿಯಲಿದೆ. ಜಿಲ್ಲೆಯ ಜನಪ್ರತಿನಿ ಧಿಗಳು ಕಬ್ಬಿನ ದರದ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು
ಆಗ್ರಹಿಸಿದರು.
ಸಂಪರ್ಕ ಕಡಿತ: ರಾಜ್ಯದಲ್ಲಿ ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿಯ ವಿದ್ಯುತ್ ಬಿಲ್ ಮನ್ನಾ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಮನ್ನಾ ಮಾಡಿಲ್ಲ. ವಿದ್ಯುತ್ ಇಲಾಖೆ ಸಿಬ್ಬಂದಿ ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ಬಳಕೆದಾರರ ಸಂಪರ್ಕ ಕಡಿತಗೊಳಿಸಿ ತೊಂದರೆ ನೀಡು ತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ದರ ಹೆಚ್ಚಿಸಿ: ಮನ್‌ಮುಲ್ ಲೀಟರ್ ಹಾಲಿಗೆ 1 ರೂ. ಹೆಚ್ಚಿಸಿ ಪಶು ಆಹಾರದ ಬೆಲೆಯನ್ನು ಏಕಾಏಕಿ 125 ರೂ. ಹೆಚ್ಚಿಸುವ ಮೂಲಕ ಹೈನುಗಾರರ ಮೇಲೆ ಬರೆ ಎಳೆದಿದೆ. ಪಕ್ಕದ ರಾಜ್ಯದಲ್ಲಿ ಲೀಟರ್ ಹಾಲಿಗೆ 40 ರೂ. ನೀಡಿ ರೈತರಿಂದ ಖರೀದಿಸುತ್ತಿದ್ದಾರೆ. ಅದರಂತೆ, ಮನ್ ಮುಲ್ ಕೂಡ ಲೀಟರ್ ಹಾಲಿಗೆ 40 ರೂ. ನೀಡಬೇಕು ಎಂದು ಒತ್ತಾಯಿಸಿದರು.
ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿ ದ್ದರೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜಾಗೃತಿ
ಮೂಡಿಸಿ ಚಳವಳಿ ವಿಸ್ತರಿಸಲು ಚಿಂತನೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ಪ್ರಸನ್ನ ಎನ್.ಗೌಡ, ಕೆ.ಪಿ.ಗೋವಿಂದೇಗೌಡ, ಮಂಡ್ಯ ತಾಲೂಕು ರೈತ ಸಂಘದ ಅಧ್ಯಕ್ಷ ಶಿವಳ್ಳಿ ಚಂದ್ರು, ಖಜಾಂಚಿ ಶೆಟ್ಟಹಳ್ಳಿ ರವಿಕುಮಾರ್, ರಘು, ಮುಟ್ಟನಹಳ್ಳಿ ವೆಂಕಟೇಶ್, ಲತಾ ಶಂ ಕರ್, ಮಂಜುನಾಥ್ ಸೇರಿ ನೂರಾರು ರೈತ ಮುಖಂಡರು, ಕಾರ್ಯಕರ್ತರು ಇದ್ದರು.
ರೈತರ ಅಸಮಾಧಾನ : ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ರೈತರು ಪ್ರತಿಭಟನೆ ನಡೆಸಿದಾಗ 150 ರೂ. ಎಸ್ ಎಪಿ ಘೋಷಿಸಿದ್ದರು. ಆದರೆ, ಬಿಜೆಪಿ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸು ತ್ತಿಲ್ಲ. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ನೀಡಿದ್ದ ಭರವಸೆ ಹುಸಿಯಾಗಿದೆ. ಸಕ್ಕರೆ ಸಚಿವ ಶಂಕರ್ ಮುನೇನಕೊಪ್ಪ ದೀಪಾವಳಿಗೆ ಸಿಹಿಸುದ್ದಿ ನೀಡುತ್ತೇನೆ ಎಂದಿದ್ದರು. ಆದರೆ, ಯಾವುದೇ ಸಿಹಿ ಸುದ್ದಿ ನೀಡಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.